ಶಿವಮೊಗ್ಗ: ಮನೆಯ ಎದುರು ಆಟವಾಡುತ್ತಾ ರಸ್ತೆಗೆ ಬಂದ ಪುಟ್ಟ ಬಾಲಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಸಾ*ವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಂಡುಗದ್ದೆಯಲ್ಲಿ ನಡೆದಿದೆ. ತೀರ್ಥಹಳ್ಳಿಯ ತ್ರಿಯಂಬಕಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಗುಡ್ಡೆಪಾಲ್ ಸಮೀಪದ ಗುಂಡುಗದ್ದೆಯ ನಿವಾಸಿ ಪ್ರಗತ್ ಎಂಬುವರ 6 ವರ್ಷದ ಮಗ ಋಷ್ಯ ಮೃ*ತಪಟ್ಟ ದುರ್ದೈವಿ.
ಅಪಘಾತ ಸಂಭವಿಸಿದ್ದು ಹೇಗೆ?
ಮನೆಯ ಎದುರು ಆಟವಾಡುತ್ತಿದ್ದ ಮಗು ಋಷ್ಯ, ಆಟದ ಭರದಲ್ಲಿ ದಿಢೀರನೆ ರಸ್ತೆಗೆ ಬಂದಿದ್ದಾನೆ. ಈ ವೇಳೆ ಮನೆಯ ಪಕ್ಕದಲ್ಲಿಯೇ ಲಾರಿಯೊಂದು ನಿಂತಿದ್ದ ಕಾರಣ, ರಸ್ತೆಯಲ್ಲಿ ಬರುತ್ತಿದ್ದ ಕಾರಿನ ಚಾಲಕನಿಗೆ ಮಗು ರಸ್ತೆಗೆ ಬಂದಿರುವುದು ಸ್ಪಷ್ಟವಾಗಿ ಕಾಣಿಸಿಲ್ಲ. ಲಾರಿಯ ಮರೆಯಿಂದ ದಿಢೀರ್ ಎಂದು ಮಗು ರಸ್ತೆಗೆ ಬಂದ ಕಾರಣ, ನಿಯಂತ್ರಣಕ್ಕೆ ಸಿಗದ ಕಾರು ಮಗುವಿಗೆ ಡಿಕ್ಕಿ ಹೊಡೆದಿದೆ.
ಮುಗಿಲುಮುಟ್ಟಿದ ಪೋಷಕರ ಆಕ್ರಂದನ
ಕಾರು ಡಿಕ್ಕಿಯಾದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ. ಆಡುತ್ತಿದ್ದ ಮಗು ಕ್ಷಣಾರ್ಧದಲ್ಲಿಯೇ ಮೃ*ತಪಟ್ಟಿದ್ದನ್ನು ಕಂಡು, ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
