S Shorts

ಲೇಡಿ ಫಿಟ್ನೆಸ್ ಕೋಚ್ ಅರಸಿ ಹರಿಯಾಣದಿಂದ ಬೆಂಗಳೂರಿಗೆ ಓಡೋಡಿ ಬಂದ ಯುವಕ..ಮುಂದೇನಾಯ್ತು ಗೊತ್ತಾ..?

ಲೇಡಿ ಫಿಟ್ನೆಸ್ ಕೋಚ್ ಅರಸಿ ಹರಿಯಾಣದಿಂದ ಬೆಂಗಳೂರಿಗೆ ಓಡೋಡಿ ಬಂದ ಯುವಕ..ಮುಂದೇನಾಯ್ತು ಗೊತ್ತಾ..?
Author: Meghana Gowda
Posted By: Meghana Gowda
Updated: Jan 21, 2026 | 6:01 AM

ಬೆಂಗಳೂರು: ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿ, ನಂತರ ಅದನ್ನೇ ಅಸ್ತ್ರವಾಗಿಸಿಕೊಂಡು ಮಹಿಳಾ ಇನ್‌ಫ್ಲೂಯೆನ್ಸರ್‌ ಒಬ್ಬರಿಗೆ ನರಕಯಾತನೆ ನೀಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಜೈಲಿಗಟ್ಟಿದ್ದಾರೆ.

ಹರಿಯಾಣ (Haryana) ಮೂಲದ ಸುಧೀರ್ ಕುಮಾರ್ (Sudhir Kumar) ಬಂಧಿತ ಆರೋಪಿ. ನಗರದ ನಿವಾಸಿಯಾಗಿರುವ ಸಂತ್ರಸ್ತೆ ಖ್ಯಾತ ಫಿಟ್‌ನೆಸ್ (Fitness)ಹಾಗೂ ನ್ಯೂಟ್ರೀಷಿಯನ್ ಇನ್‌ಫ್ಲೂಯೆನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಂತ್ರಸ್ತೆಯನ್ನು ಫಾಲೋ ಮಾಡುತ್ತಿದ್ದ ಸುಧೀರ್, ಕಾಲಕ್ರಮೇಣ ಆಕೆಗೆ ಅಶ್ಲೀಲ ಹಾಗೂ ಲೈಂಗಿಕವಾಗಿ ಪ್ರಚೋದಿಸುವ ಸಂದೇಶಗಳನ್ನು ಕಳುಹಿಸಲು ಶುರು ಮಾಡಿದ್ದನು.

ಹಂತ ಹಂತವಾಗಿ ಸಂತ್ರಸ್ತೆಯ ವಾಟ್ಸಾಪ್ ಸಂಖ್ಯೆ ಪಡೆದುಕೊಂಡ ಕಿರಾತಕ, ಅಲ್ಲಿಯೂ ತನ್ನ ವಿಕೃತ ಚೇಷ್ಟೆಗಳನ್ನು ಮುಂದುವರಿಸಿದ್ದನು. ಅಷ್ಟೇ ಅಲ್ಲದೆ, ಹರಿಯಾಣದಲ್ಲಿದ್ದೂ ಸಂತ್ರಸ್ತೆಯ ಕುಟುಂಬದವರೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕ ಸಾಧಿಸಲು ಯತ್ನಿಸಿ ಆತಂಕ ಸೃಷ್ಟಿಸಿದ್ದನು.

ಆರೋಪಿಯ ವಿಕೃತಿ ಕೇವಲ ಸೋಷಿಯಲ್ ಮೀಡಿಯಾಕ್ಕಷ್ಟೇ ಸೀಮಿತವಾಗಲಿಲ್ಲ. ಯುವತಿಯ ಮೇಲಿನ ವ್ಯಾಮೋಹದಿಂದ ಹರಿಯಾಣದಿಂದ ನೇರವಾಗಿ ಬೆಂಗಳೂರಿಗೆ ಬಂದಿಳಿದಿದ್ದನು. ಬಂದ ಮೇಲೆ ಸಂತ್ರಸ್ತೆ ಹೋಗುತ್ತಿದ್ದ ಜಿಮ್ ಹಾಗೂ ಆಕೆಯ ಸಹೋದ್ಯೋಗಿಗಳ ಬಳಿ ಹೋಗಿ ಆಕೆಯ ವೈಯಕ್ತಿಕ ಮಾಹಿತಿ ಕಲೆಹಾಕಲು ಪ್ರಯತ್ನಿಸಿದ್ದಾನೆ. ತನ್ನ ಸುತ್ತಮುತ್ತಲೇ ಆರೋಪಿ ಸುಳಿಯುತ್ತಿರುವುದನ್ನು ಕಂಡು ಬೆಚ್ಚಿಬಿದ್ದ ಇನ್‌ಫ್ಲೂಯೆನ್ಸರ್ ತಕ್ಷಣ ಪೊಲೀಸರ ಮೊರೆ ಹೋಗಿದ್ದಾರೆ.

ಯುವತಿ ನೀಡಿದ ದೂರಿನ ಮೇರೆಗೆ ಬೆಂಗಳೂರು ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಹರಿಯಾಣ ಮೂಲದ ಸುಧೀರ್ ಕುಮಾರ್‌ನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.