S Shorts

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಆರೋಪ: ಮೂವರು ಸಿಬ್ಬಂದಿ ಸಸ್ಪೆಂಡ್​​

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಆರೋಪ: ಮೂವರು ಸಿಬ್ಬಂದಿ ಸಸ್ಪೆಂಡ್​​
Author: Savina Naik
Posted By: Savina Naik
Updated: Apr 24, 2026 | 4:30 PM

ಬೆಂಗಳೂರು: ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಬೆಂಗಳೂರಿನ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನ  ಸಿಬ್ಬಂದಿಯಾದ ಸುಧಾಕರ್, ಗಿರಿಜಮ್ಮ, ಆರ್​.ಸರಿತಾ ಸಸ್ಪೆಂಡ್​ ಆಗಿದ್ದಾರೆ.

ವಿದ್ಯಾರ್ಥಿಗಳ ಜನಿವಾರ ತೆಗೆಸದಂತೆ ಸೂಚನೆ ನೀಡಲಾಗಿತ್ತು. ಆದ್ರೂ ಜನಿವಾರ ತೆಗೆಸಿದ್ದು ಉದ್ದೇಶಪೂರ್ವಕ ಘಟನೆಯಂತೆ ಕಂಡಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಕ್ರಮವಹಿಸಿದ ವಿವರ ನೀಡುವಂತೆ ಪತ್ರ ಮುಖೇನೆ ಬೆಂಗಳೂರು ನಗರ ಡಿಸಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಪತ್ರ ಬರೆಯಲಾಗಿತ್ತು.

2026ನೇ ಸಾಲಿನ ಸಿಇಟಿ ಪರೀಕ್ಷೆ ವೇಳೆ ಬೆಂಗಳೂರು ಕೇಂದ್ರದಲ್ಲಿ ಏಪ್ರಿಲ್​​ 23ರ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಲು ಅಲ್ಲಿಯ ಸಿಬ್ಬಂದಿಗಳು ಸೂಚಿಸಿರುತ್ತಾರೆಂದು, ನಂತರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿರುತ್ತಾರೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹಳ ಸ್ಪಷ್ಟವಾಗಿ ವಸ್ತ್ರ ಸಂಹಿತೆಯ ಬಗ್ಗೆ ವಿವರಿಸಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ನಿಯಮಾನುಸಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಡಿಸಿಗೆ ಬರೆದ ಪತ್ರದಲ್ಲಿ KEA ಆಗ್ರಹಿಸಿತ್ತು.

ಈ ಘಟನೆಯು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ಲೋಪವೆಸಗಿದ ಆರೋಪದ ಮೇಲೆ ಕಾಲೇಜಿನ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತು ಕಾಲೇಜಿನ ಪ್ರಾಂಶುಪಾಲರಾದ ಅಶಿಮ್ ಅಫೈಲ್ ಅವರು ಆದೇಶ ಹೊರಡಿಸಿದ್ದು ಏಪ್ರಿಲ್ 23, 2026ರಂದು ನಡೆದ ಪರೀಕ್ಷೆಯ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮತ್ತು ಅಶಿಸ್ತಿನ ವರ್ತನೆ ತೋರಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.