S Shorts

Tragedy in Shivamogga | ಹೃದಯಾಘಾತದಿಂದ ಒಂದನೇ ತರಗತಿ ವಿದ್ಯಾರ್ಥಿ ಸಾ*ವು!

Tragedy in Shivamogga |  ಹೃದಯಾಘಾತದಿಂದ ಒಂದನೇ ತರಗತಿ ವಿದ್ಯಾರ್ಥಿ ಸಾ*ವು!
Author: Meghana Gowda
Posted By: Meghana Gowda
Updated: Jun 15, 2026 | 11:11 AM

ಶಿವಮೊಗ್ಗ: ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತದ ಪ್ರಕರಣಗಳು ಮತ್ತೊಮ್ಮೆ ಆತಂಕ ಮೂಡಿಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದೆ. ಕೇವಲ 6 ವರ್ಷದ ಒಂದನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಏಕಾಏಕಿ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ಕೊಡನವಳ್ಳಿ ಗ್ರಾಮದಲ್ಲಿ ನಡೆದಿದೆ.

ಸಾಗರ ತಾಲೂಕಿನ ಕರೂರು ಹೋಬಳಿಯ ಕೊಡನವಳ್ಳಿ ಗ್ರಾಮದ ನಿವಾಸಿಗಳಾದ ಗೌತಮ್ ಜೈನ್ ಮತ್ತು ಶಿಲ್ಪಾ ದಂಪತಿಯ ಮುದ್ದಿನ ಪುತ್ರ ತ್ರಿಲೋಕ್ ಜೈನ್ (6 ವರ್ಷ) ಮೃತಪಟ್ಟ ದುರ್ದೈವಿ ಬಾಲಕ. ಈತ ಸಮೀಪದ ಹಾಳಸಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದನು. ಶನಿವಾರ ಎಂದಿನಂತೆ ಶಾಲೆ ಮುಗಿದ ಬಳಿಕ ತ್ರಿಲೋಕ್ ತನ್ನ ಮನೆಗೆ ಮರಳಿ ತೆರಳುತ್ತಿದ್ದನು.

ಈ ವೇಳೆ ಮಾರ್ಗ ಮಧ್ಯೆ ಬಾಲಕನಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡು ಏಕಾಏಕಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ತಕ್ಷಣವೇ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ದುರದೃಷ್ಟವಶಾತ್ ಮಾರ್ಗ ಮಧ್ಯದಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಆಟವಾಡುವ ವಯಸ್ಸಿನಲ್ಲೇ ಕಣ್ಣಿನ ಮಣಿಯಂತಿದ್ದ ಮುದ್ದಿನ ಮಗನನ್ನು ಕಳೆದುಕೊಂಡ ಹೆತ್ತ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಕಣ್ಣೀರಲ್ಲಿ ಮುಳುಗಿದೆ. ಬಾಲಕ ತ್ರಿಲೋಕ್ ಜೈನ್ ಅಕಾಲಿಕ ನಿಧನಕ್ಕೆ ಶಾಲಾಭಿವೃದ್ಧಿ ಸಮಿತಿ (SDMC), ಶಿಕ್ಷಕ ವೃಂದ ಹಾಗೂ ಕೊಡನವಳ್ಳಿ ಗ್ರಾಮಸ್ಥರು ತೀವ್ರ ಕಂಬನಿ ಮಿಡಿದಿದ್ದಾರೆ.