ತುಮಕೂರು ನಗರದಲ್ಲಿ ಮಾದಕವಸ್ತು ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ನಡೆಸಿರುವ ತಿಲಕ್ ಪಾರ್ಕ್ ಠಾಣೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ ಪೊಲೀಸ್ ಕಾನ್‌ಸ್ಟೇಬಲ್ ಪುತ್ರ ಸೇರಿ ಒಟ್ಟು 6 ಮಂದಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಸತೀಶ್, ಪ್ರಮೋದ್ ಕುಮಾರ್, ದಿಶಾಂತ್ (21), ದರ್ಶನ್, ಅಮೋಘ ನಾಗಭೂಷಣ್ ಹಾಗೂ ಮಂಜುನಾಥ್ ಎಂದು ಗುರುತಿಸಲಾಗಿದೆ. ಈ ಪೈಕಿ ಆರೋಪಿ ದಿಶಾಂತ್ ತುಮಕೂರು ಸಮವಸ್ತ್ರ ಪಡೆಯ ಕಾನ್‌ಸ್ಟೇಬಲ್ ಒಬ್ಬರ ಪುತ್ರನಾಗಿದ್ದಾನೆ. ಪ್ರಮುಖ ಪೆಡ್ಲರ್ ಆಗಿರುವ ಮಂಜುನಾಥ್ ಬೆಂಗಳೂರು ಮೂಲದವನಾಗಿದ್ದು, ಈತ ತುಮಕೂರಿಗೆ ಗಾಂಜಾ ಮತ್ತು ಇತರ ಮಾದಕವಸ್ತುಗಳನ್ನು ತಂದು ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ ಎಂಬ ಆಘಾತಕಾರಿ ವಿಚಾರ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಬಂಧಿತರಲ್ಲಿ ಕಾಲೇಜು ವಿದ್ಯಾರ್ಥಿಗಳು ಕೂಡ ಸೇರಿದ್ದು, ಈ ಜಾಲದಲ್ಲಿರುವ ಮತ್ತಷ್ಟು ಪೆಡ್ಲರ್‌ಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಇನ್ಸ್‌ಪೆಕ್ಟರ್ ನಧಾಪ್ ಹಾಗೂ ಪಿಎಸ್‌ಐ ಯೋಗೇಶ್ ನೇತೃತ್ವದ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಬಂಧಿತರಿಂದ 2 ಲಕ್ಷ ರೂ. ಬೆಲೆಬಾಳುವ 1 ಕೆಜಿ 655 ಗ್ರಾಂ ಗಾಂಜಾ ಸೊಪ್ಪು, ಸುಮಾರು 2.30 ಲಕ್ಷ ರೂ. ಮೌಲ್ಯದ ಹೈಡ್ರೋವೀಡ್ ಗಾಂಜಾ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ 40 ಲಕ್ಷ ರೂ. ಮೌಲ್ಯದ ಒಂದು ಫಾರ್ಚೂನರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಆರೋಪಿಗಳಿಂದ 44.30 ಲಕ್ಷ ರೂ. ಮೌಲ್ಯದ ಗಾಂಜಾ ಸೊಪ್ಪು, ಮಾದಕ ಮತ್ತು ಮದ್ದು ಬರಿಸುವ ವಸ್ತುಗಳು ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ 81/2026 ಕ್ರಮಾಂಕದಡಿ ಪ್ರಕರಣ ದಾಖಲಾಗಿದ್ದು, ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ.
