ಬೆಂಗಳೂರು: ರಾಜಧಾನಿಯ ಬಾಣಸವಾಡಿಯಲ್ಲಿ ಎರಡು ವರ್ಷದ ಹೆಣ್ಣು ಮಗುವೊಂದು ಅತ್ಯಂತ ಅನುಮಾನಾಸ್ಪದ ರೀತಿಯಲ್ಲಿ ಸಾ*ವನ್ನಪ್ಪಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾರ್ಲೆಟ್ ಡೈಸಿ (2) ಮೃ*ತಪಟ್ಟ ದುರ್ದೈವಿ ಮಗು. ಮಗುವು ಉಸಿರಾಟದ ಸಮಸ್ಯೆಯಿಂದ ಸಾ*ವನ್ನಪ್ಪಿದೆ ಎಂದು ಪೋಷಕರು ಹೇಳುತ್ತಿರುವುದಾದರೂ, ತಂದೆ-ತಾಯಿಯ ನಡವಳಿಕೆಯ ಮೇಲೆ ತೀವ್ರ ಅನುಮಾನಗಳು ವ್ಯಕ್ತವಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ಸ್ಟ್ರೀಟ್‌ನಲ್ಲಿ ಈ ದಾರುಣ ಘಟನೆ ನಡೆದಿದೆ. ಜೇಸನ್ ಆಂಥೋನಿ ಮತ್ತು ರೋಸ್ಲಿನ್ ಎಂಬ ಜೋಡಿಯು ಕಳೆದ ಕೆಲವು ವರ್ಷಗಳಿಂದ ವಿವಾಹವಾಗದೆ ಲಿವಿಂಗ್-ಇನ್ (Live-in relationship) ಸಂಬಂಧದಲ್ಲಿದ್ದರು. ಈ ಜೋಡಿಗೆ ಕಾರ್ಲೆಟ್ ಡೈಸಿ ಎಂಬ ಹೆಣ್ಣು ಮಗು ಜನಿಸಿತ್ತು. ಮೊನ್ನೆ ಇದ್ದಕ್ಕಿದ್ದಂತೆ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮಗು ಮೃ*ತಪಟ್ಟಿತ್ತು ಎನ್ನಲಾಗಿದೆ. ಈ ಬಗ್ಗೆ ಮೊನ್ನೆ ರಾತ್ರಿಯೇ ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿತ್ತು.
ಆದರೆ ನಿನ್ನೆ ಈ ದಂಪತಿಯ ಆಪ್ತ ಸ್ನೇಹಿತೆಯೊಬ್ಬರು ಪೊಲೀಸ್ ಠಾಣೆಗೆ ಬಂದು ನೀಡಿರುವ ದೂರು ಇಡೀ ಪ್ರಕರಣಕ್ಕೆ ಭಾರಿ ತಿರುವು ನೀಡಿದೆ. ಮಗುವಿನ ತಾಯಿ ರೋಸ್ಲಿನ್ ಮಗುವಿಗೆ ಅಮಾನವೀಯವಾಗಿ ಹೊಡೆಯುತ್ತಿದ್ದರು ಮತ್ತು ಆ ಹಿಂಸೆಯನ್ನು ತಾವು ಖುದ್ದಾಗಿ ನೋಡಿದ್ದಾಗಿ ಸ್ನೇಹಿತೆ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಮಗುವಿನ ಸಾ*ವಿನ ಹಿಂದೆ ಪೋಷಕರ ಕೈವಾಡವಿರುವ ಬಗ್ಗೆ ಅವರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮಗುವಿನ ಮೈಮೇಲೆ ಕೆಲವು ಗಾಯದ ಗುರುತುಗಳು ಸಹ ಪತ್ತೆಯಾಗಿರುವುದು ಸಂಶಯವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಸ್ನೇಹಿತೆ ನೀಡಿದ ದೂರಿನನ್ವಯ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ (Post-mortem) ವರದಿ ಬಂದ ನಂತರವಷ್ಟೇ ಉಸಿರಾಟದ ತೊಂದರೆಯಿಂದ ಸಾ*ವು ಸಂಭವಿಸಿದೆಯೇ ಅಥವಾ ಹಲ್ಲೆಯಿಂದಾಗಿಯೇ ಎಂಬ ನಿಖರವಾದ ಕಾರಣ ಅಧಿಕೃತವಾಗಿ ತಿಳಿಯಲಿದೆ. ಸದ್ಯ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 194/4 ರ ಅಡಿಯಲ್ಲಿ ಅನುಮಾನಾಸ್ಪದ ಸಾ*ವು ಪ್ರಕರಣವನ್ನು ದಾಖಲಿಸಿಕೊಂಡು ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
