ಸುಶಿಕ್ಷಿತರ ನಾಡು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪೊಲೀಸ್ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಖಾಸಗಿ ಸುದ್ದಿವಾಹಿನಿಯೊಂದು ತನ್ನ ರಹಸ್ಯ ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ಮೂಲಕ ಬಯಲಿಗೆಳೆದಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ರಕ್ಷಕರೇ ಭಕ್ಷಕರಾಗಿ ಲಂಚಕ್ಕೆ ಕೈಯೊಡ್ಡಿರುವ ದೃಶ್ಯಗಳು ರಹಸ್ಯ ಕ್ಯಾಮೆರಾದಲ್ಲಿ ರೆಡ್ ಹ್ಯಾಂಡ್ ಆಗಿ ಸೆರೆಯಾಗಿವೆ. ಲಂಚ ಪಡೆಯುವುದರಲ್ಲಿ ಇನ್ಸ್‌ಪೆಕ್ಟರ್ ಸೇರಿದಂತೆ ಠಾಣೆಯ ಇಡೀ ಸಿಬ್ಬಂದಿಯೇ ಶಾಮೀಲಾಗಿದ್ದು, ಪೊಲೀಸ್ ಇಲಾಖೆಯ ಮಾನ ಮರ್ಯಾದೆ ಹರಾಜಾಗಿದೆ. ಒಂದು ವಾರಗಳ ಕಾಲ ಉಡುಪಿಯಲ್ಲಿ ಬೀಡುಬಿಟ್ಟಿದ್ದ ಸುದ್ದಿವಾಹಿನಿ ತಂಡ ಈ ಕರಾಳ ಮುಖವನ್ನು ಅನಾವರಣಗೊಳಿಸಿದೆ.
ಕಾರ್ಕಳ ತಾಲೂಕಿನಲ್ಲಿ ನಡೆಯುವ ಗಣಿಗಾರಿಕೆ, ಜೂಜು, ಕೋಳಿ ಪಂದ್ಯ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಿಗೆ ಪೊಲೀಸರೇ ಶ್ರೀರಕ್ಷೆ ಒದಗಿಸಿದ್ದಾರೆ. ಅಕ್ರಮಕೋರರನ್ನು ನೇರವಾಗಿ ಠಾಣೆಗೆ ಕರೆಸಿಕೊಳ್ಳುವ ಸಿಬ್ಬಂದಿಗಳಾದ ಶಿವಾನಂದ ಹಾಗೂ ಉಮೇಶ್, ಅಧಿಕಾರಿಗಳಿಗೆ ನೀಡುವಷ್ಟೇ ನಮಗೂ ಪಾಲು ನೀಡಬೇಕು ಎಂದು ಪಟ್ಟು ಹಿಡಿದು ತಿಂಗಳ ‘ಮಾಮೂಲಿ’ ಫಿಕ್ಸ್ ಮಾಡಿಕೊಳ್ಳುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ನಿಟ್ಟೆ ಗ್ರಾಮದ ಮಹಾಗಣಪತಿ ಸ್ಟೋನ್ ಕ್ರಷರ್ ಮಾಲೀಕ ದಿನೇಶ್ ಶೆಟ್ಟಿ (ಜೀತು) ಅವರು ಗಣಿಗಾರಿಕೆ ನಡೆಸಲು ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿ ಲಂಚ ನೀಡುವಂತೆ ಪೊಲೀಸರು ಕಿರುಕುಳ ನೀಡುತ್ತಿರುವ ಬಗ್ಗೆ ಖಾಸಗಿ ಸುದ್ದಿವಾಹಿನಿಗೆ ದೂರು ನೀಡಿದ್ದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆಸಲಾಗಿದೆ.
ದೂರಿನ ಸತ್ಯಾಸತ್ಯತೆ ಅರಿಯಲು ಅಖಾಡಕ್ಕಿಳಿದ ಟಿವಿ ತಂಡ, ವಾಟರ್ ಪೈಪ್ ಲೈನ್ ಕಾಮಗಾರಿ ಮಾಡುವುದಾಗಿ ಹೇಳಿ ಕಾರ್ಕಳ ಇನ್ಸ್‌ಪೆಕ್ಟರ್ ಸಂದೀಪ್ ಅವರನ್ನು ಭೇಟಿಯಾಗಿತ್ತು. ಈ ವೇಳೆ ನೇರವಾಗಿ ಲಂಚಕ್ಕೆ ಬೇಡಿಕೆಯಿಟ್ಟ ಇನ್ಸ್‌ಪೆಕ್ಟರ್ ಸಂದೀಪ್, ‘ಇದು ನನ್ನ ಮೊದಲ ಪೋಸ್ಟಿಂಗ್, ಒಂದು ಲಕ್ಷ ರೂಪಾಯಿ ಕೊಡಿ’ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಕೊನೆಗೆ ಚೌಕಾಸಿ ಬಳಿಕ 30 ಸಾವಿರ ರೂಪಾಯಿಗೆ ಡೀಲ್ ಕುದುರಿಸಿಕೊಂಡಿದ್ದು, 25 ಸಾವಿರ ಹಾಗೂ 5 ಸಾವಿರ ರೂಪಾಯಿಗಳಂತೆ ಲಂಚದ ಹಣ ಸ್ವೀಕರಿಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ರೆಕಾರ್ಡ್ ಆಗಿವೆ. ಗೃಹ ಸಚಿವರು ಈ ವಿಡಿಯೋ ಆಧರಿಸಿ ನಿರ್ಲಜ್ಜ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಸಾರ್ವಜನಿಕ ಆಗ್ರಹ ವ್ಯಕ್ತವಾಗಿದೆ.
