ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ಹೆಮ್ಮೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ತಮಾಷೆಯ ಆದರೆ ಅಷ್ಟೇ ಕುತೂಹಲಕಾರಿ ಪ್ರಸಂಗವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯೊಬ್ಬರು ತಮ್ಮ ಪುಟ್ಟ ಮಗುವಿಗಾಗಿ ದುಬಾರಿ ಬೆಲೆ ಕೊಟ್ಟು ಸೀಟು ಬುಕ್ ಮಾಡಿದ್ದರೂ, ಆ ಸೀಟಿನಲ್ಲಿ ಮಗು ಕೂರುವ ಬದಲು ‘ಚಪ್ಪಲಿ’ ಇಟ್ಟಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಪರ-ವಿರೋಧದ ಚರ್ಚೆ ನಡೆಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಮಹಿಳೆ ವಿವರಿಸುವಂತೆ, ಅವರು ತಮಗಾಗಿ, ಪತಿಗಾಗಿ ಮತ್ತು ಮಗುವಿಗಾಗಿ ಒಟ್ಟು ಮೂರು ಸೀಟುಗಳನ್ನು ಬುಕ್ ಮಾಡಿದ್ದರು. ವಂದೇ ಭಾರತ್ ಟಿಕೆಟ್ ಬೆಲೆ ಸುಮಾರು 1,500 ರಿಂದ 1,700 ರೂ.ಗಳಷ್ಟಿದೆ. ಆದರೆ, ದೀರ್ಘಕಾಲದ ಪ್ರಯಾಣದಲ್ಲಿ ಮಗು ತಂದೆಯ ಮಡಿಲಲ್ಲಿಯೇ ಕುಳಿತುಕೊಳ್ಳಲು ಇಷ್ಟಪಟ್ಟಿದ್ದು, ಮಗುವಿಗಾಗಿ ಮೀಸಲಿಟ್ಟಿದ್ದ ದುಬಾರಿ ಸೀಟಿನಲ್ಲಿ ಕೇವಲ 100 ರೂ. ಬೆಲೆಯ ಚಪ್ಪಲಿಯನ್ನು ಇಡಲಾಗಿತ್ತು. ಈ ಬಗ್ಗೆ ಮಹಿಳೆ ತಮಾಷೆಯಾಗಿ ಮಾತನಾಡಿದ್ದು, “ನೋಡಿ, 100 ರೂಪಾಯಿ ಚಪ್ಪಲಿಗೆ 1,500 ರೂಪಾಯಿ ಸೀಟಿನ ಐಷಾರಾಮಿ ಭಾಗ್ಯ ಸಿಕ್ಕಿದೆ” ಎಂದು ವ್ಯಂಗ್ಯವಾಡಿದ್ದಾರೆ.
ಈ ವಿಡಿಯೋ ಅಂತರ್ಜಾಲದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವರು ಮಹಿಳೆಯ ಮಾತುಗಳನ್ನು ಹಾಸ್ಯವಾಗಿ ಸ್ವೀಕರಿಸಿ, “ಆ ಚಪ್ಪಲಿಯೇ ಪುಣ್ಯ ಮಾಡಿದೆ” ಎಂದು ಕಾಲೆಳೆದಿದ್ದಾರೆ. ಆದರೆ, ಇನ್ನು ಕೆಲವರು ಇದನ್ನು ಟೀಕಿಸಿದ್ದು, “ರೈಲ್ವೆ ನಿಯಮದ ಪ್ರಕಾರ ಚಿಕ್ಕ ಮಕ್ಕಳಿಗೆ ಸೀಟು ಬೇಡವೆಂದರೆ ಉಚಿತವಾಗಿ ಕರೆದೊಯ್ಯಬಹುದು. ಸೀಟು ಬುಕ್ ಮಾಡಿ ಅದನ್ನು ವ್ಯರ್ಥ ಮಾಡುವ ಬದಲು, ಆ ಸೀಟು ಬೇರೆ ಪ್ರಯಾಣಿಕರಿಗೆ ಸಿಗುವಂತೆ ಮಾಡಬಹುದಿತ್ತು” ಎಂದು ವಾದಿಸಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ಸೀಟುಗಳ ಲಭ್ಯತೆ ಕಡಿಮೆ ಇರುವಾಗ, ಹಣವಿದೆ ಎಂದು ಹೀಗೆ ವರ್ತಿಸುವುದು ಸರಿಯೇ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.
https://x.com/sarviind/status/2017793691205964106?s=20
