ಥೈಲ್ಯಾಂಡ್: ಪತಿ ಬೇರೆ ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿರುವುದನ್ನು ಕಂಡುಹಿಡಿದ ಥೈಲ್ಯಾಂಡ್‌ನ ಮಹಿಳೆಯೊಬ್ಬಳು, ಈಗ ತನ್ನ ಪತಿಯನ್ನೇ ಇತರರಿಗೆ ಬಾಡಿಗೆಗೆ (Rent) ನೀಡುವ ವಿಚಿತ್ರ ಪ್ರಸ್ತಾಪವನ್ನು ಮುಂದಿಟ್ಟಿದ್ದಾಳೆ.
ಥೈಲ್ಯಾಂಡ್‌ನ ಸಮುತ್ ಪ್ರಕನ್ ಪ್ರಾಂತ್ಯದ ಮಹಿಳೆಯೊಬ್ಬಳು ತನ್ನ ಪತಿ ತನಗೇ ತಿಳಿಯದಂತೆ ಬೇರೆ ಮಹಿಳೆಯರೊಂದಿಗೆ ಸಂಬಂಧ ಇಟ್ಟುಕೊಂಡಿರುವುದನ್ನು ಪತ್ತೆ ಹಚ್ಚಿದ್ದಾಳೆ. ಇದರಿಂದ ಕೋಪಗೊಳ್ಳುವ ಬದಲು, ಆಕೆ ಇದನ್ನೇ ಒಂದು ‘ಬಿಸಿನೆಸ್’ ಆಗಿ ಬದಲಾಯಿಸಲು ನಿರ್ಧರಿಸಿದ್ದಾಳೆ. ಆಕೆ ತನ್ನ ಪತಿಯನ್ನು ತಿಂಗಳಿಗೆ 35,000 ಥಾಯ್ ಭಾಟ್ (ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 85,000 ರೂ.) ಬಾಡಿಗೆಗೆ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದ್ದಾಳೆ.
ಆಕೆ ನೀಡಿರುವ ಜಾಹೀರಾತಿನಲ್ಲಿ, “ನನ್ನ ಪತಿ ತುಂಬಾ ಸುಂದರವಾಗಿದ್ದಾನೆ ಮತ್ತು ಕೆಲಸದಲ್ಲಿ ದಕ್ಷನಾಗಿದ್ದಾನೆ. ಯಾರಾದರೂ ಅವನನ್ನು ಬಾಡಿಗೆಗೆ ಪಡೆಯಲು ಬಯಸಿದರೆ ನನ್ನನ್ನು ಸಂಪರ್ಕಿಸಿ. ಪತಿಯನ್ನು ಬಾಡಿಗೆಗೆ ಪಡೆಯುವ ಮಹಿಳೆಯರು ಆತನಿಗೆ ಸರಿಯಾದ ಊಟ ಮತ್ತು ವಸತಿ ನೀಡಬೇಕು ಎಂಬ ಷರತ್ತನ್ನು ಸಹ ಆಕೆ ವಿಧಿಸಿದ್ದಾಳೆ.
ಪ್ರಸಿದ್ಧ ನಿರೂಪಕಿ ನಡೆಸಿಕೊಡುವ ಜನಪ್ರಿಯ ಥಾಯ್ ದೂರದರ್ಶನ ಕಾರ್ಯಕ್ರಮ ಹೋನ್-ಕ್ರಾಸೆಯಲ್ಲಿ ಆ ಮಹಿಳೆ ಕಾಣಿಸಿಕೊಂಡಾಗ ಈ ಕಥೆ ಬೆಳಕಿಗೆ ಬಂದಿತು, ಅಲ್ಲಿ ಅವರು ತಮ್ಮ ಮದುವೆ ಕ್ರಮೇಣ ಹೇಗೆ ಮುರಿದು ಬಿತ್ತು ಎಂಬುದರ ವಿವರಗಳನ್ನು ಹಂಚಿಕೊಂಡರು.
ನಡೆದಿದ್ದೇನು?: ಖುನ್ ಕ್ವಾಂಗ್ ಎಂದು ಗುರುತಿಸಲ್ಪಟ್ಟ ಮಹಿಳೆ, ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಸ್ವಲ್ಪ ಸಮಯದ ನಂತರ 21 ನೇ ವಯಸ್ಸಿನಲ್ಲಿ ವಿವಾಹವಾವಾಗಿದ್ದಾಳೆ. ದಂಪತಿ ಸುಮಾರು ಒಂದು ದಶಕವನ್ನು ಒಟ್ಟಿಗೆ ಕಳೆದರು ಮತ್ತು ಈಗ ಈ ದಂಪತಿಗೆ ಎಂಟು ವರ್ಷದ ಮಗನೂ ಇದ್ದಾನೆ. 2025 ರಲ್ಲಿ ಅಪರಿಚಿತ ಮಹಿಳೆಯೊಬ್ಬಳ ಸೋಶಿಯಲ್ ಮೀಡಿಯಾ ಖಾತೆಯನ್ನು ಪತಿ ಫಾಲೋ ಮಾಡುತ್ತಿರುವುದು. ಆಗ್ಗಾಗೆ ವೀಕ್ಷಿಸುತ್ತಿರುವುದು ಈಕೆ ಗಮನಕ್ಕೆ ಬಂದಿದೆ. ಹೀಗೆ ಕೆಲವು ದಿನಗಳ ನಂತರ ಆಕೆಯ ಪತಿಯ ನಡವಳಿಕೆಯು ಬದಲಾಯಿತ್ತು. ಅವನು ಆಗಾಗ್ಗೆ ಮನೆಗೆ ತಡವಾಗಿ ಹಿಂತಿರುಗುತ್ತಿದ್ದನು. ಪತ್ನಿ ಕೇಳಿದರೆ ಅಸ್ಪಷ್ಟ ವಿವರಣೆಗಳನ್ನು ನೀಡುತ್ತಿದ್ದನು.
ಗೊಂದಲ ಮತ್ತು ಅನುಮಾನದಿಂದ, ಮಹಿಳೆ ತನ್ನ ಗಂಡನ ಚಲನವಲನಗಳನ್ನು ಪತ್ತೆಹಚ್ಚಲು ಒಬ್ಬ ವ್ಯಕ್ತಿಯನ್ನು ನೇಮಿಸಿದಳು. ಈ ವೇಳೆ ಒಂದು ಸುಳಿವು ಸಿಕ್ಕಿತು, ಪತಿ ಬ್ಯಾಂಕಾಕ್‌ನ ರಾಮ್‌ಖಾಮ್‌ಹೇಂಗ್ ಪ್ರದೇಶದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ್ದಾನೆ ಎಂದು ತಿಳಿಯಿತ್ತು. ಈ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದೆ. ಪತಿ ತಾನು ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾಗಿ ಮತ್ತು ಆಕೆಯ ಅಪಾರ್ಟ್ಮೆಂಟ್ನಲ್ಲಿಯೇ ಉಳಿದುಕೊಂಡಿದ್ದಾಗಿ ಒಪ್ಪಿಕೊಂಡ.
ಕೋಪ ಮಾಡಿಕೊಂಡು ಜಗಳ ಆಡುವುದಕ್ಕಿಂತ, ಈ ರೀತಿ ಹಣ ಗಳಿಸುವುದು ಉತ್ತಮ ಎಂದು ಅರಿತುಕೊಂಡು ಗಂಡನನ್ನು ಬಾಡಿಗೆ ಕೊಡುವ ನಿರ್ಧಾರ ಮಾಡಿರುವುದಾಗಿ ಸಮರ್ಥಿಸಿಕೊಂಡಿದ್ದಾಳೆ.
ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕೆಲವರು ಇದನ್ನು ಹಾಸ್ಯವಾಗಿ ಪರಿಗಣಿಸಿದರೆ, ಇನ್ನು ಕೆಲವರು ಇದು ಪತಿಯ ನಡವಳಿಕೆಗೆ ಆಕೆ ನೀಡಿದ ಅತ್ಯಂತ ಕಟು ಪ್ರತಿಕ್ರಿಯೆ ಎಂದು ಅಭಿಪ್ರಾಯಪಟ್ಟಿದ್ದಾರೆ.
