ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ಮೇಲಿನ ಮಹತ್ವದ ಆದೇಶ ಇಂದು ಹೊರಬಿದ್ದಿದೆ. ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಈ ಹೈಪ್ರೊಫೈಲ್ ಪ್ರಕರಣದಲ್ಲಿ ಶಿಕ್ಷೆಗೆ ತಡೆಯಾಜ್ಞೆ ಹಾಗೂ ಜಾಮೀನು ಕೋರಿ ವಿನಯ್ ಕುಲಕರ್ಣಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು ಕೊನೆಗೂ ಜಾಮೀನು ಮಂಜೂರಾಗಿದೆ.
ವಿಭಾಗೀಯ ಪೀಠದಿಂದ ಆದೇಶ ಪ್ರಕಟ
ವಿನಯ್ ಕುಲಕರ್ಣಿ ಅವರ ಅರ್ಜಿಯ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್‌ನ ದ್ವಿಸದಸ್ಯ ವಿಭಾಗೀಯ ಪೀಠವು ಇಂದು ತನ್ನ ನಿರ್ಣಾಯಕ ಆದೇಶವನ್ನು ಪ್ರಕಟಿಸಿದೆ. ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಹಾಗೂ ನ್ಯಾಯಮೂರ್ತಿ ಜಿ. ಬಸವರಾಜ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪನ್ನು ನೀಡಿದ್ದು, ವಿನಯ ಕುಲಕರ್ಣಿ ದೋಷಿ ಎಂದಿದ್ದ ತೀರ್ಪಿಗೂ ತಡೆಯಾಜ್ಞೆ ನೀಡಿದೆ.
ಶಾಸಕ ಸ್ಥಾನಕ್ಕೆ ಮತ್ತೆ ಜೀವ
ಇಂದು ಹೊರಬಿದ್ದ ಹೈಕೋರ್ಟ್ ಆದೇಶದಿಂದ ವಿನಯ್ ಕುಲಕರ್ಣಿ ಅವರ ರಾಜಕೀಯ ಭವಿಷ್ಯ ಮತ್ತೆ ಚಿಗುರೊಡೆದಂತಾಗಿದೆ. ನ್ಯಾಯಾಲಯವು ಜಾಮೀನು ಮಂಜೂರು ಮಾಡಿರುವ ಹಿನ್ನಲೆ ಅಲ್ಲದೇ ದೋಷಿ ಎನ್ನುವ ತೀರ್ಪಿಗೆ ತಡೆಯಾಜ್ಞೆ ನೀಡಿರುವುದರಿಂದ ವಿನಯ ಕುಲಕರ ಶಾಸಕ ಸ್ಥಾನಕ್ಕೆ ಮತ್ತೆ ಜೀವ ಬಂದಿದೆ.
