ನವದೆಹಲಿ: ಬಿಸಿಲಿನ ಅಬ್ಬರ ಜೋರಾಗಿದೆ ಹೈಡ್ರೇಟ್ ಆಗಿರೋದು ಬಹಳ ಮುಖ್ಯ ಎಂದು ಇಲ್ಲೊಬ್ಬ ಯುವಕ ದಿನಕ್ಕೆ 5 ಲೀಟರ್ ನೀರು ಕುಡಿದು ಆಸ್ಪತ್ರೆ ಸೇರಿದ್ದಾನೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ 25 ವರ್ಷದ ಯುವಕ ದಿನವಿಡಿ ಹೊರಗೆ ಬೈಕ್‌ನಲ್ಲಿ ಸುತ್ತಾಡುತ್ತಾ ತನ್ನ ಕೆಲ್ಸ ಮಾಡ್ತಿದ್ದ. ಎಲ್ಲರಂತೆ ಈತ ಕೂಡ ಹೈಡ್ರೇಟ್ ಆಗಿರಲು ನೀರು ಸೇವಿಸಿದ್ದಾನೆ. ಬಾಟಲಿ ಖಾಲಿಯಾದಂತೆ ತುಂಬಿಸಿಕೊಳ್ತಾ ಒಂದು ದಿನಕ್ಕೆ 5 ಲೀಟರ್ ಸೇವನೆ ಮಾಡಿದ್ದಾನೆ.
ಆದ್ರೆ ಯಾವುದೇ ಆಹಾರ ಸೇವನೆ ಮಾಡಿರಲಿಲ್ಲ. ಎಲೆಕ್ಟ್ರೋಲೈಟ್ ಪಾನೀಯಗಳು ಅಥವಾ ಯಾವುದೇ ಉಪ್ಪು ಆಧಾರಿತ ಪಾನೀಯಗಳನ್ನು ಅಥವಾ ಹಣ್ಣನ್ನು ತಿಂದಿರಲಿಲ್ಲ. ಸಂಜೆಯಾಗ್ತಿದ್ದಂತೆ ಆಯಾಸ ಕಾಣಿಸಿಕೊಂಡಿದೆ. ನಿಧಾನವಾಗಿ ತಲೆ ಸುತ್ತಲು ಶುರುವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು.
ಯುವಕ ಬರೀ ನೀರು ಮಾತ್ರ ಕುಡಿದಿದ್ದು ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ. ಯುವಕನ ಸೋಡಿಯಂ ಮಟ್ಟ ಕುಸಿದಿದೆ ಎಂದು ವೈದ್ಯರು ಹೇಳಿದ್ದಾರೆ. ಸಾಮಾನ್ಯವಾಗಿ 135–145 mEq/L ಸೋಡಿಯಂ ಮಟ್ಟ ಇರಬೇಕು. ಆದ್ರೆ ಆತನಲ್ಲಿ ಅದು 124 ಕ್ಕೆ ಇಳಿದಿತ್ತು. ಇದನ್ನು ಹೈಪೋನಾಟ್ರೀಮಿಯಾ ಎಂದು ಕರೆಯಲಾಗುತ್ತದೆ. ದೇಹದಿಂದ ಉಪ್ಪು ಬೆವರಿನ ಮೂಲಕ ಹೊರಗೆ ಬಂದಾಗ ಈ ಸಮಸ್ಯೆ ಕಾಡುತ್ತದೆ.
ತಜ್ಞರು ಹೇಳುವುದೇನು?
ದೆಹಲಿಯ ಹಿರಿಯ ವೈದ್ಯರ ಪ್ರಕಾರ, ದೇಹವು ವಿಪರೀತ ನಿರ್ಜಲೀಕರಣಕ್ಕೆ (Dehydration) ಒಳಗಾದಾಗ ಒಮ್ಮೆಯೇ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದು ‘ವಾಟರ್ ಇಂಟಾಕ್ಸಿಕೇಶನ್’ (Water Intoxication) ಅಥವಾ ‘ಹೈಪೋನಾಟ್ರೀಮಿಯಾ’ ಎಂಬ ಸ್ಥಿತಿಗೆ ಕಾರಣವಾಗಬಹುದು.
ಇದರಿಂದಾಗುವ ಅಪಾಯಗಳೇನು?
-
ಸೋಡಿಯಂ ಮಟ್ಟ ಕುಸಿತ: ಒಮ್ಮೆಯೇ ಅತಿಯಾದ ನೀರು ಕುಡಿದಾಗ ರಕ್ತದಲ್ಲಿನ ಸೋಡಿಯಂ ಪ್ರಮಾಣವು ತೀವ್ರವಾಗಿ ಇಳಿಕೆಯಾಗುತ್ತದೆ.
-
ಕೋಶಗಳ ಮೇಲೆ ಪರಿಣಾಮ: ಸೋಡಿಯಂ ಕಡಿಮೆಯಾದಾಗ ದೇಹದ ಜೀವಕೋಶಗಳಲ್ಲಿ ನೀರು ತುಂಬಿಕೊಂಡು ಅವು ಉಬ್ಬಲು ಪ್ರಾರಂಭಿಸುತ್ತವೆ.
-
ಮೆದುಳಿಗೆ ಹಾನಿ: ಈ ಪ್ರಕ್ರಿಯೆಯು ಮೆದುಳಿನ ಜೀವಕೋಶಗಳ ಮೇಲೆ ಒತ್ತಡ ಹೇರಬಹುದು, ಇದರಿಂದಾಗಿ ವ್ಯಕ್ತಿ ಪ್ರಜ್ಞೆ ತಪ್ಪಬಹುದು ಅಥವಾ ಗಂಭೀರ ಸ್ಥಿತಿಯಲ್ಲಿ ಐಸಿಯು ಸೇರಬೇಕಾಗಬಹುದು.
ನೀರು ಕುಡಿಯುವ ಸರಿಯಾದ ಕ್ರಮ ಯಾವುದು?
-
ನಿಧಾನವಾಗಿ ಕುಡಿಯಿರಿ: ಎಷ್ಟೇ ಬಾಯಾರಿಕೆಯಾದರೂ ಒಮ್ಮೆಯೇ ಲೀಟರ್‌ಗಟ್ಟಲೆ ನೀರು ಕುಡಿಯುವ ಬದಲು, ಸ್ವಲ್ಪ ಸ್ವಲ್ಪವೇ ನೀರನ್ನು ಪದೇ ಪದೇ ಕುಡಿಯುವುದು ಉತ್ತಮ.
-
ಎಲೆಕ್ಟ್ರೋಲೈಟ್ಸ್ ಮುಖ್ಯ: ಕೇವಲ ಸಾಧಾರಣ ನೀರು ಕುಡಿಯುವ ಬದಲು ಅದಕ್ಕೆ ಸ್ವಲ್ಪ ಉಪ್ಪು, ಸಕ್ಕರೆ ಅಥವಾ ನಿಂಬೆ ರಸ ಸೇರಿಸಿದ ಪಾನೀಯಗಳು (ORS ನಂತಹವು) ದೇಹದ ಲವಣಾಂಶವನ್ನು ಕಾಪಾಡುತ್ತವೆ. ತಲೆನೋವು, ವಾಕರಿಕೆ ಅಥವಾ ಗೊಂದಲ ಉಂಟಾದರೆ ಅದು ಅತಿಯಾದ ನಿರ್ಜಲೀಕರಣ ಅಥವಾ ತಪ್ಪಾದ ನೀರಿನ ಸೇವನೆಯ ಲಕ್ಷಣವಾಗಿರಬಹುದು.
ಸಲಹೆ: ಬೇಸಿಗೆಯಲ್ಲಿ ಹೈಡ್ರೇಟೆಡ್ ಆಗಿರಲು ದಿನವಿಡೀ ಸಮತೋಲಿತವಾಗಿ ನೀರು ಕುಡಿಯಿರಿ.
