ಬೆಂಗಳೂರು ದೇಶದಲ್ಲಿ ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ ಮತ್ತು ಅನ್ವೇಷಣೆ ವಿಷಯದಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಕ್ಷೇತ್ರಗಳಲ್ಲಿ ಬೆಂಗಳೂರಿಗೆ ಸಮಾನವಾಗುವ ಮತ್ತೊಂದು ನಗರ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಬಗ್ಗೆ ಆಂಧ್ರಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದರು. “ಯಾರೇ ಮಾತನಾಡಲಿ, ನಾನು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಐಟಿ ವೃತ್ತಿಪರರು ಹಾಗೂ 2 ಲಕ್ಷ ವಿದೇಶೀ ಮೂಲದವರು ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರವಾಗಿದೆ. ಕೇಂದ್ರ ಸರ್ಕಾರಕ್ಕೆ ಸಿಗುವ ತೆರಿಗೆ ಆದಾಯದ ಸುಮಾರು 40 ಟಕೆಯಷ್ಟು ಇಲ್ಲಿಂದಲೇ ಬರುತ್ತದೆ,” ಎಂದು ತಿಳಿಸಿದರು.
ಮುಂದುವರೆದು ಅವರು, “ಇತರರು ತಮ್ಮ ಬಗ್ಗೆ ಗಮನ ಸೆಳೆಯಲು ಬೆಂಗಳೂರಿನ ಬಗ್ಗೆ ಮಾತನಾಡಬಹುದು. ಅವರು ಮಾಡಲಿ, ಅವರಿಗೆ ಕೇಂದ್ರ ಸರ್ಕಾರ ಸಹಾಯ ಮಾಡಲಿ. ಆದರೆ ಬೆಂಗಳೂರಿನ ಮಟ್ಟ ತಲುಪುವುದು ಸುಲಭವಲ್ಲ,” ಎಂದು ಸ್ಪಷ್ಟಪಡಿಸಿದರು.
ವಿದೇಶಿ ಹೂಡಿಕೆ ಬಗ್ಗೆ ಮಾತನಾಡುತ್ತ, “ಎಷ್ಟು ವಿದೇಶಿ ನಾಯಕರು ನನಗೆ ಸಂಪರ್ಕಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತು. ಐಟಿ ಹಾಗೂ ಕೈಗಾರಿಕಾ ಸಚಿವರೊಡನೆ ಜತೆಗೂಡಿ ನಾವು ಚರ್ಚೆ ಮಾಡುತ್ತೇವೆ. ಹಿಂದೆ ವಿದೇಶಿ ಕಂಪನಿಗಳು ಬೆಂಗಳೂರಿನಲ್ಲಿ ಬಾಡಿಗೆ ಜಾಗಗಳಲ್ಲಿ ಕೆಲಸ ಮಾಡುತ್ತಿದ್ದರೆ, ಈಗ ಅಮೆರಿಕಾದ ಬೆಳವಣಿಗೆಗಳ ನಂತರ ತಮ್ಮದೇ ಸ್ವಂತ ಜಾಗ ಮತ್ತು ಕ್ಯಾಂಪಸ್ ಖರೀದಿಸಲು ಮುಂದಾಗಿವೆ. ಇದು ಬೆಂಗಳೂರಿನ ಸಾಮರ್ಥ್ಯಕ್ಕೆ ಸಾಕ್ಷಿ,” ಎಂದು ಹೇಳಿದರು.
