ಬೆಂಗಳೂರು: ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅರ್ಪಿಸಿ, ಕೀರ್ತನ್ ನಾಡಗೌಡ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ‘418’ ಸಿನಿಮಾವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್ 23ರಂದು ತೆರೆಕಂಡ ಈ ಸೈಕಲಾಜಿಕಲ್-ಸೂಪರ್ನ್ಯಾಚುರಲ್ ಹಾರರ್ ಥ್ರಿಲ್ಲರ್ ಚಿತ್ರವು ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದು, ಬಾಕ್ಸ್ ಆಫೀಸ್ನಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಹಮ್ಮಿಕೊಂಡಿದ್ದ ಚಿತ್ರತಂಡ, ಸಿನಿಮಾ ನಿರ್ಮಾಣದ ಹಿಂದಿನ ರೋಚಕ ಅನುಭವಗಳು ಮತ್ತು ಯಶಸ್ಸಿನ ಸಂತಸವನ್ನು ಹಂಚಿಕೊಂಡಿತು.
ಯಕ್ಷಗಾನದ ಗೆಜ್ಜೆಯ ನಾದವೇ ಇಲ್ಲಿ ಭಯದ ಸಂಕೇತ:
ಚಿತ್ರದ ಪರಿಕಲ್ಪನೆ ಬಗ್ಗೆ ಮಾತನಾಡಿದ ನಿರ್ದೇಶಕ ಕೀರ್ತನ್ ನಾಡಗೌಡ, “ನೈಜ ಭಯ ಹುಟ್ಟಿಸಲು ಮುಖವಾಡದ ರಾಕ್ಷಸರು ಅಥವಾ ಕರ್ಕಶ ಶಬ್ದಗಳು ಬೇಕಿಲ್ಲ. ನಮ್ಮದೇ ಆಲೋಚನೆಗಳು ನಿಯಂತ್ರಣ ತಪ್ಪಿದಾಗ ನಿಜವಾದ ಆತಂಕ ಶುರುವಾಗುತ್ತದೆ. ತಾಯಿಯ ಮೃದುವಾದ ಜೋಗುಳವನ್ನು ತಿರುಚಿ, ಕತ್ತಲೆಯ ಕಾರಿಡಾರ್ನಲ್ಲಿ ಯಕ್ಷಗಾನದ ಗೆಜ್ಜೆಯ ಹೆಜ್ಜೆಯ ಸದ್ದಿನೊಂದಿಗೆ ಬೆರೆಸಿ ಭಯ ಹುಟ್ಟಿಸುವ ವಿಭಿನ್ನ ಪ್ರಯತ್ನ ಮಾಡಿದ್ದೇವೆ. ನನ್ನ ಮೆಂಟರ್ ಪ್ರಶಾಂತ್ ನೀಲ್ ಅವರ ನಿರ್ದೇಶನ ಶೈಲಿಯ ಪ್ರಭಾವಕ್ಕೆ ಒಳಗಾಗದೆ, ಕಥೆಗೆ ತಕ್ಕಂತೆ ನೈಜ ಧ್ವನಿಗಳ ಮೂಲಕವೇ ಹೊಸ ಹಾದಿ ತುಳಿದಿದ್ದೇನೆ” ಎಂದರು.
ತಾಯ್ತನ ವಂಚಿತ ಪಾತ್ರದಲ್ಲಿ ಚೈತ್ರಾ ಜೆ. ಆಚಾರ್:
ಚಿತ್ರದ ಪ್ರಮುಖ ನಟಿ ಚೈತ್ರಾ ಜೆ. ಆಚಾರ್ ತಮ್ಮ ಪಾತ್ರದ ಬಗ್ಗೆ ವಿವರಿಸುತ್ತಾ, “ಸಮಾಜದಲ್ಲಿ ಹೆಣ್ಣೊಬ್ಬಳು ಮಗುವನ್ನು ಪಡೆಯಲು ಸಾಧ್ಯವೇ ಇಲ್ಲವೇ ಎಂಬುದರ ಮೇಲೆಯೇ ಆಕೆಯ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಆ ಕನಸು ಕಸಿದುಕೊಂಡಾಗ ಉಂಟಾಗುವ ಕಹಿ ನೋವು ಗೀಳಾಗಿ, ಆಕೆಯನ್ನು ಮಾನಸಿಕ ಕುಸಿತಕ್ಕೆ ತಳ್ಳುವ ಆಳವಾದ ಪಾತ್ರ ಇದಾಗಿದೆ. ಇಂಥದ್ದೊಂದು ಶೂನ್ಯತೆಯಿರುವ ಪಾತ್ರ ನಿರ್ವಹಿಸಿದ ನಂತರ, ಪ್ರತಿಯೊಬ್ಬರೂ ನಮಗೆ ಕಾಣದ ಯಾವುದೋ ಮೌನ ನೋವನ್ನು ಹೊತ್ತು ಬದುಕುತ್ತಿರುತ್ತಾರೆ ಎಂಬ ಸತ್ಯ ಅರಿವಾಗುತ್ತದೆ” ಎಂದು ತಮ್ಮ ಅನುಭವ ಬಿಚ್ಚಿಟ್ಟರು.
ಮೈತ್ರಿ ಮೂವಿ ಮೇಕರ್ಸ್ ಸಾಥ್:
ಪ್ರತಿಷ್ಠಿತ ‘ಮೈತ್ರಿ ಮೂವಿ ಮೇಕರ್ಸ್’ ಬ್ಯಾನರ್ ಅಡಿಯಲ್ಲಿ ವೈ. ರವಿಶಂಕರ್ ಮತ್ತು ನವೀನ್ ಯೆರ್ನೇನಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಚೈತ್ರಾ ಜೆ. ಆಚಾರ್ ಜೊತೆಗೆ ರಮೇಶ್ ಇಂದಿರಾ, ಪ್ರೀತಿ ಪಗಡಾಲ, ಶ್ರೀಕಾಂತ್ ಗಣೇಶ್, ಸೂರ್ಯ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ದಿನೇಶ್ ದಿವಾಕರನ್ ಛಾಯಾಗ್ರಹಣ, ಅಕುಲ್ ಅವಿನಾಶ್ ಸಂಕಲನ ಹಾಗೂ ವೆಂಕಿ ಜಿ.ಜಿ. ಅವರ ಹಿನ್ನೆಲೆ ಸಂಗೀತ ಚಿತ್ರದ ಹಾರರ್ ವಾತಾವರಣವನ್ನು ಮತ್ತಷ್ಟು ದಟ್ಟವಾಗಿಸಿದೆ.
