ಮಧ್ಯಪ್ರದೇಶ: ತನ್ನ ವಿವಾಹಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ಅಪ್ರಾಪ್ತ ಹುಡುಗಿಯೊಬ್ಬಳು ಹೆತ್ತ ತಂದೆ-ತಾಯಿಗೇ ವಿಷವುಣಿಸಿ ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ಈ ಹುಡುಗಿಯು ಯುವಕನೊಬ್ಬನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು ಮತ್ತು ಆತನನ್ನೇ ಮದುವೆಯಾಗಲು ಬಯಸಿದ್ದಳು. ಆದರೆ ಈ ವಿಷಯಕ್ಕೆ ಆಕೆಯ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಆಕ್ರೋಶಗೊಂಡ ಬಾಲಕಿ, ತನ್ನ ದಾರಿಗೆ ಮುಳ್ಳಾಗಿರುವ ಹೆತ್ತವರನ್ನು ತೊಲಗಿಸಲು ಸಂಚು ರೂಪಿಸಿದ್ದಾಳೆ.
ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಬಾಲಕಿ, ಚಪಾತಿಯ ಹಿಟ್ಟಿನಲ್ಲಿ ಇಲಿ ವಿಷವನ್ನು ಬೆರೆಸಿ ಪೋಷಕರಿಗೆ ನೀಡಿದ್ದಾಳೆ. ವಿಷಪೂರಿತ ಆಹಾರ ಸೇವಿಸಿದ ತಕ್ಷಣ ಪೋಷಕರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಬಾಲಕಿಯನ್ನು ವಶಕ್ಕೆ ಪಡೆಯಲಾಗಿದ್ದು, ಈ ಕೃತ್ಯಕ್ಕೆ ಆಕೆಯ ಪ್ರೇಮಿ ಅಥವಾ ಮತ್ಯಾರಾದರೂ ಪ್ರಚೋದನೆ ನೀಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಹತ್ತಿರದಲ್ಲೇ ಗೊಬ್ಬರದ ಅಂಗಡಿ ಇದೆ, ಅಲ್ಲಿಂದ ಇಲಿ ವಿಷ ತಂದಿಟ್ಟುಕೊ. ಇವತ್ತು ನಾನೇ ರೊಟ್ಟಿ ಮಾಡುತ್ತಿದ್ದೇನೆ, ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ರೊಟ್ಟಿಯಲ್ಲಿ ವಿಷ ಬೆರೆಸಿ ಅವರಿಗೆ ತಿನ್ನಿಸಿಬಿಡುತ್ತೇನೆ ಎಂದು ಆಕೆ ಹೇಳಿದ್ದಳು. ಈ ಒಂದು ಸಂಭಾಷಣೆ ಪೊಲೀಸರ ಕೈಗೆ ಸಿಕ್ಕ ನಂತರವೇ ಬಾಲಕಿ ಮತ್ತು ಆಕೆಯ ಗೆಳೆಯ ಸುದಾಮ ಪರಸ್ಪರ ಸಂಚು ಹೂಡುತ್ತಿರುವುದು ಸ್ಪಷ್ಟವಾಗಿದೆ.
ಮನೆಯವರ ವಿರೋಧದ ನಡುವೆಯೂ ಮದುವೆಯಾಗುವ ಹಠಕ್ಕೆ ಬಿದ್ದ ಬಾಲಕಿ, ತಂದೆ- ತಾಯಿ ಸಾಯಿಸಲು ಮುಂದಾಗಿದ್ದಾಳೆ ಎನ್ನಲಾಗಿದೆ.
