S Shorts

SSLC Exam: ಹಿಂದಿಗೆ ಅಂಕ ನೀಡುವ ವಿಚಾರದಲ್ಲಿ ಸರ್ಕಾರಕ್ಕೆ ಹೈಕೋರ್ಟ್ ತರಾಟೆ!

SSLC Exam: ಹಿಂದಿಗೆ ಅಂಕ ನೀಡುವ ವಿಚಾರದಲ್ಲಿ ಸರ್ಕಾರಕ್ಕೆ ಹೈಕೋರ್ಟ್ ತರಾಟೆ!
Author: Sagaradventure
Posted By: Sagaradventure
Updated: Apr 21, 2026 | 12:22 PM

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನೇ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿದೆ.

ಈ ಹಿಂದಿನ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಹೈಕೋರ್ಟ್ ಪೀಠವು, ಪ್ರಸಕ್ತ ಸಾಲಿಗೆ ಕಡ್ಡಾಯವಾಗಿ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕವನ್ನೇ ನೀಡುವಂತೆ ಆದೇಶಿಸುವ ಮೂಲಕ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ.

ವಿಚಾರಣೆ ವೇಳೆ ಸರ್ಕಾರದ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ಪೀಠ, “ನೀವು ಎಲ್ಲರನ್ನೂ ಪಾಸ್ ಮಾಡಲೇಬೇಕು ಎಂದು ನಿರ್ಧರಿಸಿದ್ದರೆ ಪರೀಕ್ಷೆಯನ್ನೇ ಸಂಪೂರ್ಣವಾಗಿ ರದ್ದು ಮಾಡಿಬಿಡಿ” ಎಂದು ಚಾಟಿ ಬೀಸಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಧಿಸೂಚನೆ ಹೊರಡಿಸಿದಾಗಲೇ ಈ ಬಗ್ಗೆ ಸ್ಪಷ್ಟಪಡಿಸಬೇಕಿತ್ತು. ಆದರೆ, ಅಧಿಸೂಚನೆಯಲ್ಲಿಯೇ ಇಲ್ಲದ ಗ್ರೇಡ್ ಪದ್ಧತಿಯನ್ನು ಈಗ ದಿಢೀರನೆ ಅನುಷ್ಠಾನಗೊಳಿಸುತ್ತಿರುವುದು ಸರಿಯಲ್ಲ. ಮೊದಲು ನಿಯಮಗಳನ್ನು ರೂಪಿಸಿ, ಆ ಬಳಿಕ ಬೇಕಿದ್ದರೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ನ್ಯಾಯಾಲಯವು ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದಕ್ಕೂ ಮುನ್ನ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, “ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸೂಕ್ತ ತಿದ್ದುಪಡಿಯೊಂದಿಗೆ ನಿಯಮ ರಚಿಸಲು ಸರ್ಕಾರ ಕರಡು ಸಿದ್ಧಪಡಿಸುತ್ತಿದೆ, ಆದ್ದರಿಂದ ಅಂಕದ ಬದಲು ಗ್ರೇಡ್ ನೀಡಲಾಗುತ್ತಿದೆ” ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು.

ಆದರೆ, ಸರ್ಕಾರದ ಈ ವಾದವನ್ನು ಮನ್ನಿಸದ ಹೈಕೋರ್ಟ್, ಗ್ರೇಡ್ ಬದಲಿಗೆ ಅಂಕವನ್ನೇ ನೀಡುವಂತೆ ಮಹತ್ವದ ಆದೇಶ ಹೊರಡಿಸಿದೆ.