S Shorts

ಅಕ್ಷರ ಕಲಿಸಿದ ಗುರುಗಳಿಗೆ ಇಲ್ಲ ಆಸರೆ: ದಯಾಮರಣ ಕೋರಿ ರಾಷ್ಟ್ರಪತಿಗೆ 30 ಸಾವಿರ ಶಿಕ್ಷಕರ ಪತ್ರ!

ಅಕ್ಷರ ಕಲಿಸಿದ ಗುರುಗಳಿಗೆ ಇಲ್ಲ ಆಸರೆ: ದಯಾಮರಣ ಕೋರಿ ರಾಷ್ಟ್ರಪತಿಗೆ 30 ಸಾವಿರ ಶಿಕ್ಷಕರ ಪತ್ರ!
Author: Sagaradventure
Posted By: Sagaradventure
Updated: Nov 6, 2026 | 10:42 AM

ಬೆಂಗಳೂರು: ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿ, ಅಕ್ಷರ ದಾನ ಮಾಡಿದ ಗುರುಗಳ ಬದುಕಿಗೆ ಇದೀಗ ಆಸರೆಯೇ ಇಲ್ಲದಂತಾಗಿದೆ. ಅನುದಾನಿತ ಶಾಲಾ-ಕಾಲೇಜುಗಳ ನಿವೃತ್ತ ಶಿಕ್ಷಕರು ತಮಗೆ ಪಿಂಚಣಿ ಸೌಲಭ್ಯ ಒದಗಿಸುವಂತೆ ಕಳೆದ 25 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಯಾವುದೇ ನ್ಯಾಯ ಸಿಗದ ಹಿನ್ನೆಲೆಯಲ್ಲಿ, ಬೇಸತ್ತ 30 ಸಾವಿರಕ್ಕೂ ಹೆಚ್ಚು ನಿವೃತ್ತ ಶಿಕ್ಷಕರು ಇದೀಗ ನೇರವಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದು ‘ದಯಾಮರಣ’ಕ್ಕೆ (Euthanasia) ಅನುಮತಿ ಕೋರಿದ್ದಾರೆ.

ತಮ್ಮ ಇಡೀ ಜೀವನವನ್ನು ಬೋಧನೆಗಾಗಿ ಮುಡಿಪಾಗಿಟ್ಟ ಶಿಕ್ಷಕರಿಗೆ ನಿವೃತ್ತಿಯ ಬಳಿಕ ನೆಮ್ಮದಿಯೂ ಇಲ್ಲ, ಆರ್ಥಿಕ ಭದ್ರತೆಯೂ ಇಲ್ಲದಂತಾಗಿದೆ. ತಮಗೆ ಪಿಂಚಣಿ ನೀಡುವಂತೆ ಆಗ್ರಹಿಸಿ ಶಿಕ್ಷಕರು ಕಾನೂನು ಹೋರಾಟವನ್ನೂ ನಡೆಸಿದ್ದು, ಪಿಂಚಣಿ ನೀಡುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಬದುಕುವ ಹಕ್ಕಿಗಾಗಿ ಹಾಗೂ ನ್ಯಾಯಬದ್ಧವಾಗಿ ಸಿಗಬೇಕಾದ ಪಿಂಚಣಿಗಾಗಿ ಸರ್ಕಾರಗಳ ಮುಂದೆ ಅಂಗಲಾಚುತ್ತಿರುವ ಶಿಕ್ಷಕರಿಗೆ ಕೇವಲ ನಿರಾಸೆಯೇ ಎದುರಾಗಿದೆ.

ದಶಕಗಳ ಕಾಲ ಬೀದಿಗಿಳಿದು ಹೋರಾಟ ಮಾಡಿದರೂ ಕಣ್ಣು ತೆರೆಯದ ವ್ಯವಸ್ಥೆಯ ವಿರುದ್ಧ ರೋಸಿಹೋಗಿರುವ ಅನುದಾನಿತ ಶಾಲಾ-ಕಾಲೇಜುಗಳ ನಿವೃತ್ತ ಶಿಕ್ಷಕರು, ಮುಂದೇನು ಎಂಬ ದಿಕ್ಕು ತೋಚದೆ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. ಹೈಕೋರ್ಟ್ ಆದೇಶಕ್ಕೂ ಕಿಮ್ಮತ್ತು ಸಿಗದ ಈ ಶೋಚನೀಯ ಪರಿಸ್ಥಿತಿಯಲ್ಲಿ, ದಯಾಮರಣವೇ ತಮಗಿರುವ ಏಕೈಕ ದಾರಿ ಎಂದು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ತಮ್ಮ ಕಣ್ಣೀರ ಅಳಲನ್ನು ತೋಡಿಕೊಂಡಿದ್ದಾರೆ.