S Shorts

ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ವೇಳೆ ಮಣ್ಣು ಕುಸಿತ: ಟೆಕ್ನಿಷಿಯನ್ ಸಾ*ವು, ಹಿರಿಯ ಅಧಿಕಾರಿ ಗಾಯ

ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ವೇಳೆ ಮಣ್ಣು ಕುಸಿತ: ಟೆಕ್ನಿಷಿಯನ್ ಸಾ*ವು, ಹಿರಿಯ ಅಧಿಕಾರಿ ಗಾಯ
Author: Sagaradventure
Posted By: Sagaradventure
Updated: Nov 6, 2026 | 11:36 AM

ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದು ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿಯೊಬ್ಬರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದು, ಮತ್ತೋರ್ವ ಹಿರಿಯ ಅಧಿಕಾರಿ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬರ್ಚಿ-ಕರ್ಕಾ ರಸ್ತೆಯ ಬೇಡರ ಶಿರಗೂರು ಸಮೀಪ ಗುರುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಶುಕ್ರವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಗ್ರಾಮದ ನಿವಾಸಿ ಮಹೇಶ ಶೇಖಪ್ಪ ತಳವಾರ (33) ಮೃತಪಟ್ಟ ರೈಲ್ವೆ ತಾಂತ್ರಿಕ ಸಿಬ್ಬಂದಿಯಾಗಿದ್ದಾರೆ. ಗದಗದ ರಾಜೀವ್ ಗಾಂಧಿನಗರ ನಿವಾಸಿ, ರೈಲ್ವೆ ಇಲಾಖೆಯ ಹಿರಿಯ ಸೆಕ್ಷನ್ ಅಭಿಯಂತರ ಮಕ್ತುಂ ಹುಸೇನ್ ಮಹಮ್ಮದ್ ಹುಸೇನ್ ಮುಲ್ಲಾ (57) ಗಾಯಗೊಂಡಿದ್ದಾರೆ.

ಅಳ್ನಾವರ-ಅಂಬೇವಾಡಿ ಸೆಕ್ಷನ್‌ನ ಎಲ್‌ಸಿ ನಂ. 11ರಲ್ಲಿ ಕರ್ಕಾ-ಬರ್ಚಿ ರೈಲ್ವೆ ಮಾರ್ಗದ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಗಾಗಿ ಅಗೆದು ತೆಗೆದಿದ್ದ ಮಣ್ಣು ಏಕಾಏಕಿ ಕುಸಿದು ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹೇಶ ಹಾಗೂ ಮಕ್ತುಂ ಹುಸೇನ್ ಅವರ ಮೇಲೆ ಬಿದ್ದಿದೆ. ಮಣ್ಣಿನಡಿ ಸಂಪೂರ್ಣವಾಗಿ ಸಿಲುಕಿಕೊಂಡ ಮಹೇಶ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಸಿಪಿಐ ಶಿವಾನಂದ ಅಂಬಿಗೇರ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳೂ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.