S Shorts

ದೀಪಾವಳಿಗೂ ಮುನ್ನವೇ ‘ಉಸಿರುಕಟ್ಟಿದ’ ರಾಷ್ಟ್ರ ರಾಜಧಾನಿ: AQI 307ಕ್ಕೆ ಏರಿಕೆ!

ದೀಪಾವಳಿಗೂ ಮುನ್ನವೇ ‘ಉಸಿರುಕಟ್ಟಿದ’ ರಾಷ್ಟ್ರ ರಾಜಧಾನಿ: AQI 307ಕ್ಕೆ ಏರಿಕೆ!
Author: Sagaradventure
Posted By: Sagaradventure
Updated: Nov 2, 2026 | 10:14 AM

ನವದೆಹಲಿ: ರಾಷ್ಟ್ರರಾಜ್ಯಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಮತ್ತೆ ಮಿತಿಮೀರಿದೆ. ಶುಕ್ರವಾರವಷ್ಟೇ ಭಾರಿ ಮಳೆಯಿಂದಾಗಿ 60ರಷ್ಟಿದ್ದ ಗಾಳಿಯ ಗುಣಮಟ್ಟ ಸೂಚ್ಯಂಕ (AQI), ಸೋಮವಾರ ಬೆಳಿಗ್ಗೆ 7.05ರ ಸುಮಾರಿಗೆ ಬರೋಬ್ಬರಿ 307ಕ್ಕೆ ಏರಿಕೆಯಾಗುವ ಮೂಲಕ ‘ಅತ್ಯಂತ ಕಳಪೆ’ (Very Poor) ವರ್ಗಕ್ಕೆ ಕುಸಿದಿದೆ. ಭಾನುವಾರ ಸಂಜೆ ಇದು 261ರಷ್ಟಿತ್ತು. ದೀಪಾವಳಿಗೆ ಇನ್ನೊಂದು ವಾರ ಬಾಕಿ ಇರುವಾಗಲೇ ದೆಹಲಿಯಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ.

36 ಕೇಂದ್ರಗಳಲ್ಲಿ ‘ಅತ್ಯಂತ ಕಳಪೆ’ ವಾತಾವರಣ! 

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶದ ಪ್ರಕಾರ, ದೆಹಲಿಯ 58 ವಾಯುಗುಣಮಟ್ಟ ಮಾಪನ ಕೇಂದ್ರಗಳ ಪೈಕಿ 36 ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’ ಮಟ್ಟದಲ್ಲಿದೆ. ಜಹಾಂಗೀರ್‌ಪುರಿಯಲ್ಲಿ ಎಕ್ಯೂಐ 417 ದಾಖಲಾಗಿದ್ದು, ‘ಗಂಭೀರ’ (Severe) ವರ್ಗದಲ್ಲಿದೆ. 58 ಕೇಂದ್ರಗಳ ಪೈಕಿ 51ರಲ್ಲಿ ಅಪಾಯಕಾರಿ PM2.5 ಪ್ರಾಥಮಿಕ ಮಾಲಿನ್ಯಕಾರಕವಾಗಿ ದಾಖಲಾಗಿದೆ. ಈ ವರ್ಷದ ಫೆಬ್ರವರಿ 11ರಂದು ಕೊನೆಯ ಬಾರಿಗೆ ದೆಹಲಿಯಲ್ಲಿ 305 ಎಕ್ಯೂಐ ದಾಖಲಾಗಿತ್ತು.

ಕೃಷಿ ತ್ಯಾಜ್ಯ ದಹನ ಆತಂಕ: 

ನಾಸಾ (NASA) ಉಪಗ್ರಹದ ದತ್ತಾಂಶಗಳ ಪ್ರಕಾರ, ಅಕ್ಟೋಬರ್ 1 ರಿಂದ ನವೆಂಬರ್ 1ರ ನಡುವೆ ಪಂಜಾಬ್ ಮತ್ತು ಹರಿಯಾಣದಲ್ಲಿ ಒಟ್ಟು 1,394 ಕೃಷಿ ತ್ಯಾಜ್ಯ ದಹನ (Stubble burning) ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಪಂಜಾಬ್‌ನಲ್ಲಿ 1,249 ಮತ್ತು ಹರಿಯಾಣದಲ್ಲಿ 145 ಪ್ರಕರಣಗಳು ಸೇರಿವೆ. ಉಪಗ್ರಹದ ಕಣ್ಣಿಗೆ ಬೀಳದಿರಲು ರೈತರು ಮಧ್ಯಾಹ್ನ 1.30ರ ಬದಲಿಗೆ 3 ಗಂಟೆಯ ನಂತರ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವುದು ಆತಂಕ ಹೆಚ್ಚಿಸಿದೆ.

ಮುಂದಿನ 10 ದಿನಗಳಲ್ಲಿ ಮತ್ತಷ್ಟು ಅಪಾಯ: 

ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಾಲಿನ್ಯ ಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞ ನವದೀಪ್ ದಹಿಯಾ ಎಚ್ಚರಿಸಿದ್ದಾರೆ. 

“ವಾಯುವ್ಯ ದಿಕ್ಕಿನಿಂದ ಗಾಳಿ ಬೀಸುತ್ತಿದ್ದು, ವಾತಾವರಣ ಸ್ಥಬ್ದವಾಗಿದೆ. ಮುಂದಿನ 7 ರಿಂದ 10 ದಿನಗಳವರೆಗೆ ಯಾವುದೇ ಅನುಕೂಲಕರ ಹವಾಮಾನ ನಿರೀಕ್ಷೆಯಿಲ್ಲ. ಇದರಿಂದಾಗಿ ದೆಹಲಿ-ಎನ್‌ಸಿಆರ್ ಹಾಗೂ ಉತ್ತರದ ಬಯಲು ಸೀಮೆಗಳಲ್ಲಿ ಹೊಗೆಮಂಜು (Smog) ಮತ್ತಷ್ಟು ಹೆಚ್ಚಾಗಲಿದೆ” ಎಂದು ಅವರು ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ದೀಪಾವಳಿ ಪಟಾಕಿ ಹೊಗೆ ಸೇರಿಕೊಂಡರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.