S Shorts

‘ಗೃಹಲಕ್ಷ್ಮಿ’ ಫಲಾನುಭವಿಗಳೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಂವಾದ: ಮಹಿಳೆಯರಿಗೆ ಬಾಗಿನ ನೀಡಿ ಗೌರವ

‘ಗೃಹಲಕ್ಷ್ಮಿ’ ಫಲಾನುಭವಿಗಳೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಂವಾದ: ಮಹಿಳೆಯರಿಗೆ ಬಾಗಿನ ನೀಡಿ ಗೌರವ
Author: Sagaradventure
Posted By: Sagaradventure
Updated: Nov 6, 2026 | 3:30 PM

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಬದುಕಿನಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆ ಹಾಗೂ ಆರ್ಥಿಕ ಸ್ವಾವಲಂಬನೆಯ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಫಲಾನುಭವಿಗಳೊಂದಿಗೆ ಆತ್ಮೀಯ ಸಂವಾದ ನಡೆಸಿದರು. ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಮಹಿಳೆಯರು ಯೋಜನೆಯಿಂದ ತಮಗೆ ದೊರೆತ ಆರ್ಥಿಕ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಅನುಭವಗಳನ್ನು ಸಿಎಂ ಜೊತೆ ಮುಕ್ತವಾಗಿ ಹಂಚಿಕೊಂಡರು.

ಈ ವೇಳೆ ಫಲಾನುಭವಿಗಳು ತಾವೇ ಕೈಯಾರೆ ತಯಾರಿಸಿದ್ದ ಪುಟ್ಟ ತೊಟ್ಟಿಲು, ದೀಪ ಸೇರಿದಂತೆ ವಿವಿಧ ಕರಕುಶಲ ವಸ್ತುಗಳನ್ನು ಮುಖ್ಯಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿ ಸಂಭ್ರಮಿಸಿದರು. ಮಹಿಳೆಯರ ಕೈಯಲ್ಲಿ ಅರಳಿದ ಸೃಜನಶೀಲತೆ ಹಾಗೂ ಅವರ ಮಾತುಗಳಲ್ಲಿದ್ದ ಆತ್ಮವಿಶ್ವಾಸ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ, ಇದೇ ದೀಪಾವಳಿಯ ಶುಭ ಸಂದರ್ಭದಲ್ಲಿ ಮಹಿಳೆಯರಿಗೆ ಸೌಭಾಗ್ಯ ಹಾಗೂ ಸಮೃದ್ಧಿಯ ಸಂಕೇತವಾದ ‘ಬಾಗಿನ’ ನೀಡಿ ಗೌರವಿಸಿದರು. ಬಳಿಕ ಅವರೊಂದಿಗೇ ಕುಳಿತು ಭೋಜನ ಸವಿದರು.

“ಮಹಿಳೆಯರು ಕೇವಲ ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಪಾಲುದಾರರಾಗದೆ, ಸ್ವಂತ ದುಡಿಮೆ, ಉದ್ಯಮಶೀಲತೆ ಮತ್ತು ಸ್ವಾವಲಂಬನೆಯ ಮೂಲಕ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳುತ್ತಿರುವುದು ಗೃಹಲಕ್ಷ್ಮಿ ಯೋಜನೆಯ ಆಶಯಕ್ಕೆ ಮತ್ತಷ್ಟು ಅರ್ಥ ತುಂಬಿದೆ. ಮಹಿಳೆಯರ ಬದುಕಿನಲ್ಲಿ ಮೂಡುತ್ತಿರುವ ಈ ಆತ್ಮವಿಶ್ವಾಸವೇ ಯೋಜನೆಗೆ ಸಾರ್ಥಕತೆ ನೀಡಿದೆ” ಎಂದು ಅಭಿಪ್ರಾಯಪಡಲಾಯಿತು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್ ಹಾಗೂ ಇಲಾಖೆಯ ನಿರ್ದೇಶಕ ಡಾ. ಮಹೇಶ್ ಬಾಬು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.