S Shorts

Ethanol ಮಿಶ್ರಣ E20 ಅಲ್ಲ, ‘420’ ರೀತಿ ಆಗೋಗಿದೆ: ಕೇಂದ್ರದ ವಿರುದ್ಧ ರಿಜ್ವಾನ್ ಅರ್ಷದ್ ಕಿಡಿ

Ethanol ಮಿಶ್ರಣ E20 ಅಲ್ಲ, ‘420’ ರೀತಿ ಆಗೋಗಿದೆ: ಕೇಂದ್ರದ ವಿರುದ್ಧ ರಿಜ್ವಾನ್ ಅರ್ಷದ್ ಕಿಡಿ
Author: Sagaradventure
Posted By: Sagaradventure
Updated: Nov 6, 2026 | 1:00 PM

ಬೆಂಗಳೂರು: ಪೆಟ್ರೋಲ್‌ನಲ್ಲಿ ಮಿತಿಮೀರಿದ ಎಥೆನಾಲ್ (Ethanol) ಮಿಶ್ರಣದಿಂದಾಗಿ ವಾಹನಗಳ ಇಂಜಿನ್ ಹಾಳಾಗುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ರಿಜ್ವಾನ್ ಅರ್ಷದ್, ಕೇಂದ್ರ ಸರ್ಕಾರ, ತೈಲ ಕಂಪನಿಗಳು ಹಾಗೂ ವಾಹನ ವಿಮಾ ಕಂಪನಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಇದು E20 (ಶೇ. 20ರಷ್ಟು ಎಥೆನಾಲ್ ಮಿಶ್ರಣ) ಅಲ್ಲ, 420 (ಮೋಸ) ರೀತಿ ಆಗೋಗಿದೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಜನಸಾಮಾನ್ಯರ ಪರವಾಗಿ ಮತ್ತು ಜವಾಬ್ದಾರಿಯುತವಾಗಿ ಈ ವಿಚಾರ ಪ್ರಸ್ತಾಪಿಸುತ್ತಿರುವುದಾಗಿ ಹೇಳಿದ ಅವರು, “ಕೇಂದ್ರ ಸರ್ಕಾರ E20 ಎಂದರೆ, ಅಷ್ಟೇ ಮಿಶ್ರಣ ಇರಬೇಕು. ಆದರೆ, 7 ಜಿಲ್ಲೆಗಳ 63 ಸ್ಯಾಂಪಲ್‌ಗಳನ್ನು ಪರೀಕ್ಷಿಸಿದಾಗ ಬಹುತೇಕ ಕಂಪನಿಗಳ ಎಥೆನಾಲ್ ವರದಿ ಶೇ. 20ಕ್ಕಿಂತ ಮೇಲೆಯೇ ಇದೆ. ಐಒಸಿಎಲ್ (IOCL) ನ 14 ಸ್ಯಾಂಪಲ್‌ಗಳಲ್ಲಿ ಶೇ. 31.2, ಎಚ್‌ಪಿಸಿಎಲ್ (HPCL) ನಲ್ಲಿ ಶೇ. 30.5ರಷ್ಟು ಎಥೆನಾಲ್ ಪತ್ತೆಯಾಗಿದೆ. ಈ ಬಗ್ಗೆ ವಾಸ್ತವಾಂಶಗಳನ್ನು ಕೇಂದ್ರ ಸಚಿವಾಲಯಗಳು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಮಿತಿಮೀರಿದ ಮಿಶ್ರಣ ಮಾಡುವ ತೈಲ ಕಂಪನಿಗಳಿಗೆ ದಂಡ ವಿಧಿಸಬೇಕು” ಎಂದು ಆಗ್ರಹಿಸಿದರು.

ವಾಹನ ರಿಪೇರಿಗೆ ಜನರ ಹಣ, ವಿಮಾ ಕಂಪನಿಗಳ ನಿರ್ಲಕ್ಷ್ಯ: 

“ಹಲವು ಕಾರ್ ಕಂಪನಿಗಳೇ ಶೇ. 20ರಷ್ಟು ಎಥೆನಾಲ್ ಬಳಕೆಗೆ ನಮ್ಮ ವಾಹನಗಳು ಸಿದ್ಧವಾಗಿಲ್ಲ ಎಂದು ತಿಳಿಸಿವೆ. ಮೈಲೇಜ್ ಕಡಿಮೆ ಆಗುತ್ತದೆ ಎಂದು ನೀತಿ ಆಯೋಗವೇ ಹೇಳಿದೆ. ಆದರೂ 3 ವರ್ಷಗಳಲ್ಲಿ E10 ನಿಂದ E20 ಮಾಡಲು ಹೊರಟಿದ್ದಾರೆ. ಎಥೆನಾಲ್ ಮಿಶ್ರಣದಿಂದ ವಾಹನಗಳ ಇಂಜಿನ್ ಡ್ಯಾಮೇಜ್ ಆದರೆ, ವಾರಂಟಿ ಕವರ್ ಆಗುವುದಿಲ್ಲ ಎಂದು ವಿಮಾ (Insurance) ಕಂಪನಿಗಳು ಹೇಳುತ್ತಿವೆ. 

ವಾಹನಗಳ ರಿಪೇರಿಗಾಗಿ ಜನರು ಪ್ರತಿ ಬಾರಿ 2-3 ಸಾವಿರ ರೂ. ಖರ್ಚು ಮಾಡುತ್ತಿದ್ದಾರೆ. ಇದಕ್ಕೆ ಹೊಣೆ ಯಾರು? ಕೇಂದ್ರ ಸರ್ಕಾರವು ತಕ್ಷಣ ವಿಮಾ ಕಂಪನಿಗಳ ನಿಯಮಗಳನ್ನು ಮಾರ್ಪಡಿಸಿ, ಜನರಿಗೆ ನಷ್ಟ ತುಂಬಿಕೊಡಲು ‘E20 ಹಾನಿ ಪರಿಹಾರ ನಿಧಿ’ ಸ್ಥಾಪಿಸಬೇಕು” ಎಂದು ಅವರು ಒತ್ತಾಯಿಸಿದರು.

ಇದೇ ವೇಳೆ ನೋಟು ಅಮಾನ್ಯೀಕರಣ (Note Ban) ನಿರ್ಧಾರವನ್ನು ಟೀಕಿಸಿದ ಅವರು, “ಯಾರದ್ದೋ ಸಲಹೆ ಕೇಳಿ ದಿಢೀರನೇ ನೋಟ್ ಬ್ಯಾನ್ ಮಾಡಿದರು, ಜನರು ಸಾಲಿನಲ್ಲಿ ನಿಂತು ಸತ್ತರು, ಆರ್ಥಿಕತೆ ಹಾಳಾಯಿತು. ಈಗ ಎಥೆನಾಲ್ ವಿಚಾರದಲ್ಲೂ ಹಾಗೇ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಬಂದರೆ 52 ರೂ.ಗೆ ಪೆಟ್ರೋಲ್ ಸಿಗುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದ್ದರು. ಅದು ಯಾವಾಗ ಬರುತ್ತದೆ? ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದಾಗ ಜನರಿಗೆ ಅದರ ಲಾಭ ಸಿಗುತ್ತಿಲ್ಲ” ಎಂದು ರಿಜ್ವಾನ್ ಅರ್ಷದ್ ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನಿಸಿದರು. 

ಪೆಟ್ರೋಲ್ ಬಂಕ್‌ಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಬೇಕು ಮತ್ತು ಗ್ರಾಹಕರಿಗೆ ಇಂಧನ ಆಯ್ಕೆಯ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.