ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಕಾಯನ ದೊಡ್ಡಿ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮೊಮ್ಮಗನಿಂದಲೇ ಅಜ್ಜಿಯ ಬರ್ಬರ ಕೊ*ಲೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಪ್ರೀತಿಯಿಂದ ಬೆಳೆಸಿದ ಮೊಮ್ಮಗನೇ ಗಾಂಜಾ ಮತ್ತಿನಲ್ಲಿ ಅಜ್ಜಿಯ ನೆತ್ತರು ಹರಿಸಿದ್ದಾನೆ.
ಕೆಂಚಕಾಯನ ದೊಡ್ಡಿ ಗ್ರಾಮದ ನಿವಾಸಿ ಗೌರಮ್ಮ ಎಂಬುವವರೇ ಕೊ*ಲೆಯಾದ ದುರ್ದೈವಿ. ಇವರ ಮೊಮ್ಮಗ ಪ್ರಜ್ವಲ್ ಈ ಭೀಕರ ಕೃತ್ಯವೆಸಗಿದ ಆರೋಪಿ. ಪ್ರಜ್ವಲ್ ತೀವ್ರವಾಗಿ ಮದ್ಯಪಾನ ಹಾಗೂ ಗಾಂಜಾ ವ್ಯಸನಕ್ಕೆ ತುತ್ತಾಗಿದ್ದನು. ತನಗೆ ಆಸ್ತಿ ಬರೆದುಕೊಡುವಂತೆ ಆತ ಅಜ್ಜಿ ಗೌರಮ್ಮ ಅವರಿಗೆ ನಿರಂತರವಾಗಿ ಪೀಡಿಸುತ್ತಿದ್ದನು ಎಂದು ತಿಳಿದುಬಂದಿದೆ.
ತಮ್ಮ ಪ್ರಾಣವನ್ನೇ ತೆಗೆಯಲು ಇದೇ ಆಸ್ತಿ ಮುಳುವಾಗುತ್ತದೆ ಎಂದು ಅಜ್ಜಿ ಊಹಿಸಿರಲಿಲ್ಲ. ಆಸ್ತಿ ನೀಡಲು ನಿರಾಕರಿಸಿದ ಕಾರಣಕ್ಕೆ ರೊಚ್ಚಿಗೆದ್ದ ಪ್ರಜ್ವಲ್, ನಿನ್ನೆ ಗಾಂಜಾ ಮತ್ತಿನಲ್ಲಿ ಅಜ್ಜಿಯ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಚಾಕುವಿನಿಂದ ಇರಿದು, ಕತ್ತು ಸೀಳಿ ಅತ್ಯಂತ ಅಮಾನುಷವಾಗಿ ಹ*ತ್ಯೆ ಮಾಡಿದ್ದಾನೆ. ಈ ರಕ್ತಪಾತದ ಘಟನೆಯಿಂದಾಗಿ ಬನ್ನೇರುಘಟ್ಟ ಭಾಗದ ಜನತೆ ಬೆಚ್ಚಿಬಿದ್ದಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಬನ್ನೇರುಘಟ್ಟ ಠಾಣೆಯ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿ ಪ್ರಜ್ವಲ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
