S Shorts

ಜಮೀನು ಮಾರಾಟ ವಿವಾದಕ್ಕೆ ಸಂಬಂಧಿಕರ ಮನೆ ಮೇಲೆ ಮಾರಕಾಸ್ತ್ರ ದಾಳಿ; ಕಾರು, ಬೈಕ್ ಜಖಂ

ಜಮೀನು ಮಾರಾಟ ವಿವಾದಕ್ಕೆ ಸಂಬಂಧಿಕರ ಮನೆ ಮೇಲೆ ಮಾರಕಾಸ್ತ್ರ ದಾಳಿ; ಕಾರು, ಬೈಕ್ ಜಖಂ
Author: Sagaradventure
Posted By: Sagaradventure
Updated: Jul 25, 2026 | 11:33 AM

ಆನೇಕಲ್: ಜಮೀನು ಮಾರಾಟ ವಿಚಾರದಲ್ಲಿ ಉಂಟಾದ ಕುಟುಂಬದ ವಿವಾದ ಸಂಬಂಧಿಕರ ಮನೆ ಮೇಲಿನ ದಾಳಿಗೆ ಕಾರಣವಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲಸಂದ್ರ ಗ್ರಾಮದಲ್ಲಿ ನಡೆದಿದೆ.

ಮೈಲಸಂದ್ರ ಗ್ರಾಮದ ವಿಶ್ವನಾಥ್ ರೆಡ್ಡಿ ಅವರ ಮನೆ ಮೇಲೆ ಕೆಲವರು ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿದ್ದು, ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರು ಹಾಗೂ ಬೈಕ್ ಅನ್ನು ಜಖಂಗೊಳಿಸಿರುವ ಆರೋಪ ಕೇಳಿಬಂದಿದೆ.

ಮಾಹಿತಿಯ ಪ್ರಕಾರ, ವಿಶ್ವನಾಥ್ ರೆಡ್ಡಿ ಅವರ ಪುತ್ರ ಅರ್ಜುನ್ ಅವರು ಕೆ.ಆರ್.ಪುರಂ ಮೂಲದ ದಿವ್ಯ ಅವರನ್ನು ವಿವಾಹವಾಗಿದ್ದರು. ದಿವ್ಯ ಅವರ ಸಹೋದರ ಸುಮಂತ್ ಅವರಿಗೆ ಕೆ.ಆರ್.ಪುರಂ ಸಮೀಪದ ತತ್ತನೂರು ಗ್ರಾಮದಲ್ಲಿ ಜಮೀನು ಇದ್ದು, ಅದನ್ನು ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಜಮೀನು ಮಾರಾಟಕ್ಕೆ ವಿಶ್ವನಾಥ್ ರೆಡ್ಡಿ ಅಡ್ಡಿಪಡಿಸುತ್ತಿದ್ದರು ಎನ್ನಲಾಗಿದೆ.

ಈ ವಿಚಾರವಾಗಿ ಮಾತುಕತೆ ನಡೆಸಲು ಸುಮಂತ್ ಅವರು ಸೋಮವಾರ ಸಂಜೆ ಮೈಲಸಂದ್ರದಲ್ಲಿರುವ ವಿಶ್ವನಾಥ್ ರೆಡ್ಡಿ ಅವರ ಮನೆಗೆ ಬಂದಿದ್ದರು. ಮಾತುಕತೆ ಬಳಿಕ ಅವರು ವಾಪಸ್ ತೆರಳಿದ್ದರು. ಆದರೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ನಾಲ್ವರು ಯುವಕರೊಂದಿಗೆ ಮರಳಿ ಬಂದು ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದಾಳಿಯ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹಾನಿಗೊಳಿಸಲಾಗಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಇತರ ವಿವರಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.