S Shorts

ನವವಿವಾಹಿತರ BreakUp ಕಹಾನಿಗೆ ರೋಚಕ ಟ್ವಿಸ್ಟ್: ಎಂಗೇಜ್‌ಮೆಂಟ್ ಸೀರೆಯನ್ನು ಲವರ್‌ಗೆ Gift ಕೊಟ್ಟ ಪತಿ!

ನವವಿವಾಹಿತರ BreakUp ಕಹಾನಿಗೆ ರೋಚಕ ಟ್ವಿಸ್ಟ್: ಎಂಗೇಜ್‌ಮೆಂಟ್ ಸೀರೆಯನ್ನು ಲವರ್‌ಗೆ Gift ಕೊಟ್ಟ ಪತಿ!
Author: Sagaradventure
Posted By: Sagaradventure
Updated: Jan 24, 2026 | 10:03 AM

​ಬೆಂಗಳೂರು(ಆನೇಕಲ್): ಮದುವೆಯಾಗಿ ಸುಖವಾಗಿರಬೇಕಿದ್ದ ನವವಿವಾಹಿತರ ಬದುಕಿನಲ್ಲಿ ಮೂರನೇ ವ್ಯಕ್ತಿಯ ಪ್ರವೇಶದಿಂದ ದೊಡ್ಡ ರಂಪಾಟವೇ ನಡೆದಿದೆ. ವಿವಾಹಕ್ಕೂ ಮುನ್ನ ಇದ್ದ ಪ್ರೇಮ ಸಂಬಂಧವನ್ನು ಮದುವೆಯ ನಂತರವೂ ಮುಂದುವರಿಸಿದ ಪತಿ, ಪತ್ನಿ ಧರಿಸಬೇಕಿದ್ದ ಎಂಗೇಜ್‌ಮೆಂಟ್ ಸೀರೆಯನ್ನೇ ತನ್ನ ಪ್ರೇಯಸಿಗೆ ಗಿಫ್ಟ್ ನೀಡಿದ್ದಾನೆ ಎಂಬ ವಿಚಿತ್ರ ಹಾಗೂ ಗಂಭೀರ ಆರೋಪವೊಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಕೇಳಿಬಂದಿದೆ.

ಕಲಬುರಗಿ ಮೂಲದ ಅಂಬರೀಶ್ ಮತ್ತು ಆನೇಕಲ್ ತಾಲೂಕಿನ ಬನಹಳ್ಳಿ ನಿವಾಸಿ ನಂದಿನಿ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಆದರೆ ಮದುವೆಯಾದ ಒಂದೇ ವಾರಕ್ಕೆ ದಾಂಪತ್ಯದಲ್ಲಿ ಬಿರುಕು ಮೂಡಿದೆ. “ನನ್ನ ಪತಿ ಅಂಬರೀಶ್‌ಗೆ ಮದುವೆಗೂ ಮುನ್ನವೇ ಬೇರೆ ಯುವತಿಯ ಜೊತೆ ಸಂಬಂಧವಿತ್ತು. ಮದುವೆಯ ನಂತರವೂ ಅದು ಮುಂದುವರಿದಿದೆ. ಇದಕ್ಕೆ ಪತಿಯ ತಾಯಿಯೂ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲ, ನನ್ನ ನಿಶ್ಚಿತಾರ್ಥದ ಸೀರೆಯನ್ನು ಅತ್ತೆಯೇ ಸ್ವತಃ ಐರನ್ ಮಾಡಿಕೊಟ್ಟು, ಮಗನ ಮೂಲಕ ಆತನ ಪ್ರೇಯಸಿಗೆ ಗಿಫ್ಟ್ ನೀಡಿದ್ದಾರೆ” ಎಂದು ನೊಂದ ಪತ್ನಿ ನಂದಿನಿ ಕಣ್ಣೀರಿಟ್ಟಿದ್ದಾರೆ.

ಪತಿ ನಿತ್ಯ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದಾನೆ. ಬಾವನ ಜೊತೆ ಹೆಚ್ಚು ಮಾತನಾಡುತ್ತೀಯಾ ಎಂದು ಶಂಕಿಸಿ ಜಗಳ ತೆಗೆಯುತ್ತಿದ್ದನು. ಅಲ್ಲದೆ, “ಜಾತಿ ವಿಷಯವನ್ನು ಮುಚ್ಚಿಟ್ಟು ನಮಗೆ ಮೋಸ ಮಾಡಿ ಮದುವೆ ಮಾಡಿಸಿದ್ದೀರಿ” ಎಂದು ಪತಿ ಮತ್ತು ಅತ್ತೆ ಸೇರಿಕೊಂಡು ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾರೆ ಎಂದು ನಂದಿನಿ ದೂರಿದ್ದಾರೆ.

ಇತ್ತ ಮಗಳನ್ನು ಮನೆಯಿಂದ ಹೊರಹಾಕಿದ ವಿಷಯ ತಿಳಿಯುತ್ತಿದ್ದಂತೆಯೇ ಸಿಟ್ಟಿಗೆದ್ದ ನಂದಿನಿ ಕುಟುಂಬಸ್ಥರು, ಅಂಬರೀಶ್ ಮೇಲೆ ಹಲ್ಲೆ ನಡೆಸಿ ಆತನ ಕಾಲನ್ನೇ ಮುರಿದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಅಂಬರೀಶ್ ತಾಯಿ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಸೊಸೆಯ ಕುಟುಂಬದ ವಿರುದ್ಧ ದೂರು ನೀಡಿದ್ದಾರೆ.

ಎಫ್‌ಐಆರ್ ದಾಖಲಾಗಿದ್ದರೂ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಂಬರೀಶ್ ಕಡೆಯವರು ಆರೋಪಿಸಿದ್ದು, ನವವಿವಾಹಿತರ ಜಗಳ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿ ಠಾಣಾ ಅಂಗಳದಲ್ಲಿ ರಂಪಾಟಕ್ಕೆ ಕಾರಣವಾಗಿದೆ.