ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಆಟೋ ಚಾಲಕರು ಹಾಗೂ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿಗಳ (ಉಬರ್, ರ್ಯಾಪಿಡೊ) ನಡುವಿನ ಸಮರ ದಿನೇ ದಿನೇ ತಾರಕಕ್ಕೇರುತ್ತಿದೆ. ಪ್ರಯಾಣಿಕರು ಹಾಗೂ ಚಾಲಕರ ನಡುವಿನ ಗೊಂದಲಗಳು, ದೈನಂದಿನ ಕಿರಿಕಿರಿಗಳು ಇದೀಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿವೆ.
ಆಪ್ಗಳಲ್ಲಿ ಬುಕಿಂಗ್ ಸ್ವೀಕರಿಸದಿರಲು, ಮೀಟರ್ ಹಾಕದಿರಲು ಕಾರಣವೇನು?
ಆಟೋ ಚಾಲಕರು ಆಪ್ಗಳಲ್ಲಿ ಬೇಗನೆ ರೈಡ್ ಅಕ್ಸೆಪ್ಟ್ (Accept) ಮಾಡದಿರಲು ಪ್ರಮುಖ ಕಾರಣ ಟ್ರಾಫಿಕ್ ಹಾಗೂ ಆಪ್ಗಳು ವಿಧಿಸುವ ಕಮಿಷನ್. ಪಿಕಪ್ ಲೊಕೇಶನ್ ದೂರವಿದ್ದಾಗ ಟ್ರಾಫಿಕ್ನಲ್ಲಿ ಇಂಧನ ವ್ಯಯಿಸಿ ಬಂದರೆ ಅವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇನ್ನು ‘ಮೀಟರ್ ಯಾಕೆ ಹಾಕಲ್ಲ?’ ಎಂಬ ಪ್ರಶ್ನೆಗೆ ಚಾಲಕರು ನೀಡುವ ಅಸಲಿ ಕಾರಣ– ಬೆಲೆ ಏರಿಕೆ. ದಿನಸಿ, ಗ್ಯಾಸ್, ನಿರ್ವಹಣಾ ವೆಚ್ಚ ಹೆಚ್ಚಾಗಿದ್ದರೂ ಸರ್ಕಾರ ನಿಗದಿಪಡಿಸಿದ ಮೀಟರ್ ದರ ಮಾತ್ರ ಏರಿಕೆಯಾಗಿಲ್ಲ. ಹೀಗಾಗಿ ಕೇವಲ ಮೀಟರ್ ಹಾಕಿದರೆ ಜೀವನ ನಡೆಸುವುದು ಕಷ್ಟ ಎಂಬುದು ಆಟೋ ಚಾಲಕರ ಅಳಲು.
https://youtu.be/gHODaXiZqo0?si=UezfrGZoRekYT6UP
ರಾತ್ರಿ ಪ್ರಯಾಣದ ಭಯ ಮತ್ತು ಕ್ಯಾನ್ಸಲೇಶನ್ ಚಾರ್ಜ್:
ರಾತ್ರಿ ವೇಳೆ ಆಟೋದಲ್ಲಿ ಪ್ರಯಾಣಿಸಲು ಪ್ರಯಾಣಿಕರು, ವಿಶೇಷವಾಗಿ ಮಹಿಳೆಯರು ಭಯಪಡಲು ಕೆಲವು ಅಹಿತಕರ ಘಟನೆಗಳೇ ಕಾರಣ. ನಿರ್ಜನ ಪ್ರದೇಶಗಳಲ್ಲಿ ಮೀಟರ್ಗಿಂತ ದುಪ್ಪಟ್ಟು ಹಣ ಕೇಳುವುದು, ಮದ್ಯದ ಅಮಲಿನಲ್ಲಿ ಒರಟಾಗಿ ವರ್ತಿಸುವಂತಹ ಪ್ರಕರಣಗಳು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿವೆ. ಇನ್ನು, ಆಪ್ಗಳಲ್ಲಿ ಆಟೋ ಬುಕ್ ಮಾಡಿ, ಚಾಲಕರು ಬರಲು ತಡವಾದಾಗ ಅಥವಾ ‘ಎಕ್ಸ್ಟ್ರಾ ಹಣ‘ ಕೇಳಿದಾಗ ಪ್ರಯಾಣಿಕರು ರೈಡ್ ಕ್ಯಾನ್ಸಲ್ ಮಾಡುತ್ತಾರೆ. ಇದರಿಂದ ಪ್ರಯಾಣಿಕರಿಗೂ, ಕೆಲವೊಮ್ಮೆ ಚಾಲಕರಿಗೂ ಕ್ಯಾನ್ಸಲೇಶನ್ (Cancellation charges) ದಂಡ ಬೀಳುವ ಕಿರಿಕಿರಿ ತಪ್ಪಿದ್ದಲ್ಲ.
ಬೈಕ್ ಟ್ಯಾಕ್ಸಿ ಕಂಡರೆ ಆಟೋ ಚಾಲಕರು ಕೆರಳುವುದು, ಬೈಯುವುದು ಏಕೆ?
ಆಟೋ ಚಾಲಕರು ಬೈಕ್ ಟ್ಯಾಕ್ಸಿಗಳ (Uber, Rapido) ಸವಾರರನ್ನು ಕಂಡರೆ ಕೆಟ್ಟ ಪದಗಳಿಂದ ನಿಂದಿಸಲು ಮತ್ತು ಹಲ್ಲೆ ಮಾಡಲು ಮುಖ್ಯ ಕಾರಣ ಹೊಟ್ಟೆಪಾಡಿನ ಭಯ. ವೈಟ್ ಬೋರ್ಡ್ (ಸ್ವಂತ ಬಳಕೆಯ) ಬೈಕ್ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಕಾನೂನುಬಾಹಿರ ಎಂಬುದು ಆಟೋ ಚಾಲಕರ ವಾದ. ಬೈಕ್ ಟ್ಯಾಕ್ಸಿಗಳು ಅತಿ ಕಡಿಮೆ ದರದಲ್ಲಿ ಸೇವೆ ನೀಡುತ್ತಿರುವುದರಿಂದ ಆಟೋಗಳ ದಿನಗೂಲಿಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಆಪ್ಗಳಿಂದಲೇ ಬೈಕ್ ಟ್ಯಾಕ್ಸಿಗಳನ್ನು ರಿಮೂವ್ ಮಾಡಬೇಕು ಮತ್ತು ಅವುಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.
“ನಾವೇನು ಸಾಚಾ ಅಲ್ಲ!”:
ಬೈಕ್ ಟ್ಯಾಕ್ಸಿಗಳನ್ನು ವಿರೋಧಿಸುವ ಭರದಲ್ಲಿ, ಕೆಲವು ಪ್ರಾಮಾಣಿಕ ಆಟೋ ಚಾಲಕರು “ನಾವೇನು ಸಂಪೂರ್ಣ ಸಾಚಾ ಅಲ್ಲ” ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ. ಹತ್ತಿರದ ಜಾಗಕ್ಕೆ ಬರಲು ನಿರಾಕರಿಸುವುದು, ಪ್ರಯಾಣಿಕರ ಬಳಿ ಸುಲಿಗೆ ಮಾಡುವುದು, ದುರ್ವರ್ತನೆ ತೋರುವಂತಹ ಕೆಲವೇ ಕೆಲವು ಆಟೋ ಚಾಲಕರ ವರ್ತನೆಯೇ ಜನರನ್ನು ಅನಿವಾರ್ಯವಾಗಿ ಬೈಕ್ ಟ್ಯಾಕ್ಸಿಗಳತ್ತ ಮುಖಮಾಡುವಂತೆ ಮಾಡಿದೆ ಎಂಬ ಕಟು ಸತ್ಯವನ್ನು ಅವರು ಅರಿತಿದ್ದಾರೆ.
