ಬಾಗಲಕೋಟೆ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಎಕ್ಸೆಲ್ ಪಾಟಾ ಕಟ್ ಆಗಿ ನಿಯಂತ್ರಣ ತಪ್ಪಿ ಜಮೀನಿಗೆ ನುಗ್ಗಿದ ಪರಿಣಾಮ ಭಾರೀ ಅನಾಹುತವೊಂದು ಅದೃಷ್ಟವಶಾತ್ ತಪ್ಪಿರುವ ಘಟನೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಗೋವಿನಕೊಪ್ಪ ಗ್ರಾಮದ ಬಳಿ ನಡೆದಿದೆ.
ಬಾಗಲಕೋಟೆ–ಹುಬ್ಬಳ್ಳಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಈ ಅವಘಡ ಸಂಭವಿಸಿದೆ. 60ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್‌ನ ಎಕ್ಸೆಲ್ ಪಾಟಾ (Axle leaf spring) ದಿಢೀರ್ ತುಂಡಾಗಿದೆ. ಇದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್, ರಸ್ತೆಯಿಂದ ಪಕ್ಕದಲ್ಲಿದ್ದ ಜಮೀನಿಗೆ ವೇಗವಾಗಿ ನುಗ್ಗಿದೆ.
ಬಸ್ ಜಮೀನಿಗೆ ನುಗ್ಗಿದ ರಭಸಕ್ಕೆ ಒಳಗಿದ್ದ ಐದಾರು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ತಕ್ಷಣವೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಭಾರೀ ಪ್ರಾಣಾಪಾಯದಿಂದ ಪಾರಾಗಿರುವ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
