ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಂಬರ್ ಯಾರ್ಡ್ ಬಳಿ ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಆಟೋ ಚಾಲಕನಿಗೆ ಚಾಕು ಇರಿದಿರುವ ಘಟನೆ ನಡೆದಿದೆ.
ರಾತ್ರಿ ಊಟದ ಸಮಯದಲ್ಲಿ ಆಟೋ ಚಾಲಕ ತಾನು ದುಡ್ಡು ಕೊಟ್ಟು ತಂದಿದ್ದ ಕುಡಿಯುವ ನೀರನ್ನು ಇಟ್ಟುಕೊಂಡಿದ್ದನು. ಈ ವೇಳೆ ಅಲ್ಲಿಗಾಗಮಿಸಿದ ಟೆಂಪೋ ಚಾಲಕ ಮಹದೇವ ಎಂಬಾತ ಆಟೋ ಚಾಲಕನ ಅನುಮತಿ ಕೇಳದೆ ಆ ನೀರನ್ನು ಕುಡಿದಿದ್ದಾನೆ. ತಾನು ಹಣ ಕೊಟ್ಟು ತಂದಿದ್ದ ನೀರನ್ನು ಕೇಳದೆ ಏಕೆ ಕುಡಿದೆ ಎಂದು ಆಟೋ ಚಾಲಕ ಪ್ರಶ್ನಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ತೀವ್ರ ವಾಗ್ವಾದ ಹಾಗೂ ಕಿರಿಕ್ ಶುರುವಾಗಿದೆ.
ಜಗಳ ವಿಕೋಪಕ್ಕೆ ಹೋದಾಗ, ಕೋಪಗೊಂಡ ಟೆಂಪೋ ಚಾಲಕ ಮಹದೇವ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಲು ತನ್ನ ಮಗನಿಗೆ ಕರೆ ಮಾಡಿದ್ದಾನೆ. ತಂದೆಯ ಕರೆಯ ಮೇರೆಗೆ ಸ್ಥಳಕ್ಕೆ ಬಂದ ಮಹದೇವನ ಮಗ ಹಾಗೂ ಆತನ ಸ್ನೇಹಿತರಿಬ್ಬರು ಸೇರಿ ಆಟೋ ಚಾಲಕನ ಮೇಲೆ ಏಕಾಏಕಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಜಗಳದ ನಡುವೆ, ಮಹದೇವನ ಮಗ ಹಾಗೂ ಆತನ ಸ್ನೇಹಿತ ಸೇರಿ ಆಟೋ ಚಾಲಕನ ಪೃಷ್ಟ ಭಾಗಕ್ಕೆ (Buttocks) ಚಾಕು ಇರಿದು ತೀವ್ರವಾಗಿ ಗಾಯಗೊಳಿಸಿ, ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯನ್ನು ನೋಡಿದ ತಕ್ಷಣವೇ ಸ್ಥಳೀಯರು 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಪೊಲೀಸರು, ಗಾಯಗೊಂಡಿದ್ದ ಆಟೋ ಚಾಲಕನನ್ನು ರಕ್ಷಿಸಿ ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಆಟೋ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
