ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ನಾಳೆ ಭಾರಿ ವ್ಯತ್ಯಯ ಉಂಟಾಗಲಿದೆ. ಕಾವೇರಿ 4ನೇ ಹಂತದ 1ನೇ ಘಟ್ಟದ ಯೋಜನೆಯಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ, ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾವೇರಿ ನೀರು ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಜಲಮಂಡಳಿ (BWSSB) ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪೈಪ್‌ಲೈನ್‌ಗಳಲ್ಲಿ ಆಗಿರುವ ಸೋರಿಕೆಯನ್ನು ತಡೆಗಟ್ಟಲು ಜಲರೇಚಕ ಯಂತ್ರಗಳನ್ನು (Pumping machines) ಬರೋಬ್ಬರಿ 12 ಗಂಟೆಗಳ ಕಾಲ ಸ್ಥಗಿತಗೊಳಿಸಿ ಈ ತುರ್ತು ದುರಸ್ತಿ ಕಾರ್ಯವನ್ನು ನಡೆಸಲಾಗುತ್ತಿದೆ.
ಯಾವೆಲ್ಲಾ ಪ್ರದೇಶಗಳಲ್ಲಿ ವ್ಯತ್ಯಯ?
ಈ ತುರ್ತು ದುರಸ್ತಿ ಕಾಮಗಾರಿಯಿಂದಾಗಿ ನಗರದ ಬಹುತೇಕ ಭಾಗದಲ್ಲಿ ಅಂದರೆ ಅರ್ಧ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ತೊಂದರೆಯಾಗಲಿದೆ. ಪ್ರಮುಖವಾಗಿ ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಗಾಯತ್ರಿ ನಗರ, ಇಂದಿರಾನಗರ, ಮಂಜುನಾಥ ನಗರ, ದಾಸರಹಳ್ಳಿ, ಜಾಲಹಳ್ಳಿ, ಹಂಪಿನಗರ, ಯಲಚೇನಹಳ್ಳಿ, ಕೋಣನಕುಂಟೆ, ನವೋದಯ ನಗರ ಹಾಗೂ ಶಾರದ ನಗರ ಸೇರಿದಂತೆ ಹಲವೆಡೆ ನಾಳೆ ಹಗಲಿಡೀ ನೀರು ಸರಬರಾಜು ಇರುವುದಿಲ್ಲ. ಹೀಗಾಗಿ ಈ ಭಾಗದ ನಿವಾಸಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಇಂದೇ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸೂಕ್ತವಾಗಿದೆ.
ಇತರೆ ಹಂತಗಳಲ್ಲಿ ಎಂದಿನಂತೆ ನೀರು ಪೂರೈಕೆ
ಕೇವಲ ಕಾವೇರಿ 4ನೇ ಹಂತದ 1ನೇ ಘಟ್ಟದ ಯೋಜನೆಯಲ್ಲಿ ಮಾತ್ರ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ, ಈ ವ್ಯಾಪ್ತಿಯ ಪ್ರದೇಶಗಳಲ್ಲಿ ಮಾತ್ರ ಸಮಸ್ಯೆ ಇರಲಿದೆ. ನಗರದ ಇತರೆ ಭಾಗಗಳಿಗೆ ನೀರು ಒದಗಿಸುವ ಕಾವೇರಿ 1, 2, 3 ಹಾಗೂ 5ನೇ ಹಂತದ ಯೋಜನೆಗಳ ಅಡಿಯಲ್ಲಿ ಬರುವ ಪ್ರದೇಶಗಳಿಗೆ ಎಂದಿನಂತೆಯೇ ಯಾವುದೇ ಅಡಚಣೆಯಿಲ್ಲದೆ ಕಾವೇರಿ ನೀರು ಸರಬರಾಜಾಗಲಿದೆ. ಅನಿವಾರ್ಯವಾಗಿ ನಡೆಯುತ್ತಿರುವ ಈ ತುರ್ತು ಕಾಮಗಾರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಅಧಿಕಾರಿಗಳು ಮನವಿ ಮಾಡಿದ್ದಾರೆ.
