ಬೆಂಗಳೂರು: ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಹುಡುಗಿಯರಿದ್ದಾರೆ ಎಂದು ಆಮಿಷವೊಡ್ಡಿ, ಅವರನ್ನು ಭೇಟಿಯಾಗಲು ಬಂದವರನ್ನು ಅಪಹರಿಸಿ ಸುಲಿಗೆ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ (CCB) ಮಹಿಳಾ ಸಂರಕ್ಷಣಾ ದಳದ (WPW) ಅಧಿಕಾರಿಗಳು ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಂಚನೆಯ ಜಾಲ, ಕೃತ್ಯದ ವಿಧಾನ
ಕೆ.ಜಿ. ಹಳ್ಳಿಯ ಹೆಚ್.ಆರ್.ಬಿ.ಆರ್ ಲೇಔಟ್‌ನಲ್ಲಿ (HRBR Layout) ಈ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಗಳು ಲೊಕ್ಯಾಂಟೋ (Locanto) ವೆಬ್‌ಸೈಟ್‌ನಲ್ಲಿ ಹುಡುಗಿಯರ ಬಗ್ಗೆ ಮಾಹಿತಿ ಹಾಕಿ ಗ್ರಾಹಕರನ್ನು ಆಕರ್ಷಿಸುತ್ತಿದ್ದರು. ವೆಬ್‌ಸೈಟ್‌ನ ಮಾಹಿತಿ ನಂಬಿ ಯುವತಿಯನ್ನು ಭೇಟಿಯಾಗಲು ಬಂದ ವ್ಯಕ್ತಿಯೊಬ್ಬರನ್ನು ಈ ಗ್ಯಾಂಗ್ ಟಾರ್ಗೆಟ್ ಮಾಡಿತ್ತು. ಭೇಟಿಯ ಸ್ಥಳದಲ್ಲಿ ಆಟೋದಲ್ಲಿ ಕುಳಿತಿದ್ದ ಜೀಬಾ ಖಾನ್ ಮತ್ತು ದೀಪಾ ಎಂಬುವವರನ್ನು ಭೇಟಿ ಮಾಡುವ ಮುನ್ನವೇ ಸಂತ್ರಸ್ತನನ್ನು ಅಪಹರಿಸಲಾಗಿತ್ತು.
ಕಿಡ್ನಾಪ್, ಸುಲಿಗೆ
ಚೇತನ್, ಮನು, ಶಾಬು, ಮಂಜುನಾಥ, ಜಯಕುಮಾರ್, ಅರುಣ ಕೀರ್ತಿ, ಕಾಂತ ರಾಜು ಹಾಗೂ ಸಂದೀಪ್ ಸೇರಿದಂತೆ ಇತರರು ಸೇರಿ ಸಂತ್ರಸ್ತನನ್ನು ಅಪಹರಿಸಿದ್ದರು. ಬಳಿಕ ಆತನನ್ನು ನಗರದ ವಿವಿಧ ಭಾಗಗಳಲ್ಲಿ ಸುತ್ತಾಡಿಸಿ, ಬೆದರಿಕೆ ಹಾಕಿ ಆತನ ಬಳಿಯಿದ್ದ ಹಣ, ಮೊಬೈಲ್ ಮತ್ತು ಚಿನ್ನದ ಚೈನ್‌ಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು.
ಸಿಸಿಬಿ ಕಾರ್ಯಾಚರಣೆ, ವಸ್ತುಗಳ ವಶ
ಈ ಘಟನೆಯ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ದೂರು ಪಡೆದು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾರ್ಯಾಚರಣೆ ನಡೆಸಿ 11 ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಆಟೋಗಳು, 4 ದ್ವಿಚಕ್ರ ವಾಹನಗಳು, 13 ಮೊಬೈಲ್ ಫೋನ್‌ಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚಿನ ತನಿಖೆ ಮುಂದುವರಿಕೆ
ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ. ಈ ಗ್ಯಾಂಗ್ ಇದೇ ಮಾದರಿಯಲ್ಲಿ ಹಲವಾರು ಜನರಿಗೆ ಹುಡುಗಿಯರ ಆಸೆ ತೋರಿಸಿ, ಕಿಡ್ನಾಪ್ ಮಾಡಿ ಸುಲಿಗೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
