S Shorts

5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊ*ಲೆ ಆರೋಪಿ ಹಾಗೂ ಕುಖ್ಯಾತ ರೌಡಿಶೀಟರ್ CCB ಬಲೆಗೆ!

5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊ*ಲೆ ಆರೋಪಿ ಹಾಗೂ ಕುಖ್ಯಾತ ರೌಡಿಶೀಟರ್ CCB ಬಲೆಗೆ!
Author: Sagaradventure
Posted By: Sagaradventure
Updated: Oct 5, 2026 | 5:12 PM

ಬೆಂಗಳೂರು ನಗರದಲ್ಲಿ ರೌಡಿ ಚಟುವಟಿಕೆಗಳ ನಿಗ್ರಹಕ್ಕೆ ಸಮರ ಸಾರಿರುವ ಸಿಸಿಬಿ (CCB) ಸಂಘಟಿತ ಅಪರಾಧ ದಳದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೊಲೆ ಪ್ರಕರಣವೊಂದರಲ್ಲಿ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಹಾಗೂ 3 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ರೌಡಿಶೀಟರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸಿಪಿ ಶ್ರೀನಿವಾಸ್ ಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸರಣಿ ಕಾರ್ಯಾಚರಣೆಗಳಿಗೆ ನಗರದ ರೌಡಿಪಡೆ ಬೆಚ್ಚಿಬಿದ್ದಿದೆ.

ಐದು ವರ್ಷದಿಂದ ಎಸ್ಕೇಪ್ ಆಗಿದ್ದ ಕೊ*ಲೆ ಆರೋಪಿ ಸೆರೆ: 

ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ (ಮೊ.ಸಂ. 149/2020) ಭಾಗಿಯಾಗಿ, ಕಳೆದ 5 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಆರೋಪಿ ಸೈಯ್ಯದ್ ಶೋಬೇನ್ ಬಿನ್ ಸೈಯ್ಯದ್ ಅಫ್ಸರ್ ಎಂಬಾತನನ್ನು ಸಿಸಿಬಿ ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ಸ್ಥಳೀಯ ಪೊಲೀಸರು ಈತನ ಬಂಧನಕ್ಕೆ ಸಾಕಷ್ಟು ಯತ್ನ ನಡೆಸಿದ್ದರೂ ಆತ ಸಿಕ್ಕಿರಲಿಲ್ಲ. ಇದೀಗ ಬಂಧಿತನನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕೆ.ಜಿ. ಹಳ್ಳಿ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಮೂರು ವರ್ಷದಿಂದ ಕೋರ್ಟ್‌ಗೆ ಚಕ್ಕರ್ ಹಾಕಿದ್ದ ರೌಡಿಶೀಟರ್ ಸೆರೆ: 

ಮತ್ತೊಂದು ಕಾರ್ಯಾಚರಣೆಯಲ್ಲಿ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಇಮ್ರಾನ್ ಅಲಿಯಾಸ್ ‘ಕಬೂತರ್ ಇಮ್ರಾನ್’ (38) ಎಂಬಾತನನ್ನು ಬಂಧಿಸಲಾಗಿದೆ. ಕೊಲೆ ಯತ್ನ, ದರೋಡೆ ಯತ್ನ ಹಾಗೂ ಮಾದಕವಸ್ತು (ಡ್ರಗ್ಸ್) ಮಾರಾಟ ಪ್ರಕರಣ ಸೇರಿದಂತೆ 8ಕ್ಕೂ ಹೆಚ್ಚು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತ, ಕಳೆದ 3 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನ ವಿರುದ್ಧ ಜಾಮೀನು ರಹಿತ ವಾರಂಟ್ (NBW) ಜಾರಿಗೊಳಿಸಿತ್ತು. ಖಚಿತ ಮಾಹಿತಿ ಆಧರಿಸಿ ಈತನನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು, ಡಿ.ಜೆ. ಹಳ್ಳಿ ಠಾಣೆ ಪೊಲೀಸರ ಮುಂದೆ ಹಾಜರುಪಡಿಸಿದ್ದಾರೆ.