ಬೆಂಗಳೂರು: ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದ್ದು, ಬಸ್ ಪ್ರಯಾಣ ದರ ಹೆಚ್ಚಳವನ್ನು ಖಚಿತಪಡಿಸಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಟಿಕೆಟ್ ದರ ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕರಣೆಯಾಗಲಿದೆ.
ಟಿಕೆಟ್ ದರದಲ್ಲಿ ಕನಿಷ್ಠ 9 ರೂ.ಗಳಷ್ಟು ಏರಿಕೆಯಾಗಲಿದ್ದು, ಪ್ರಯಾಣದ ಹಂತಗಳ (ಸ್ಟೇಜ್) ಆಧಾರದ ಮೇಲೆ ದರ ನಿಗದಿಯಾಗಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಸ್ ದರ ಏರಿಕೆಗೆ ಪ್ರಮುಖ ಕಾರಣಗಳನ್ನು ವಿವರಿಸಿದರು. ಒಂದು ಲೀಟರ್ ಡೀಸೆಲ್ ಬೆಲೆಯಲ್ಲಿ 10.47 ರೂ. ಹೆಚ್ಚಳವಾಗಿದ್ದು, ಪ್ರಸ್ತುತ ಸಾರಿಗೆ ನಿಗಮಗಳ ಶೇಕಡ 80ರಷ್ಟು ಆದಾಯವು ಕೇವಲ ಡೀಸೆಲ್ ಹಾಗೂ ಸಿಬ್ಬಂದಿ ವೇತನಕ್ಕೆ ವ್ಯಯವಾಗುತ್ತಿದೆ. ಪ್ರತಿ ವರ್ಷ ಡೀಸೆಲ್‌ಗಾಗಿ 5,694 ಕೋಟಿ ರೂ. ಖರ್ಚಾಗುತ್ತಿದ್ದು, ಇಂಧನ ಬೆಲೆ ಏರಿಕೆಯಿಂದಲೇ ನಿಗಮಗಳಿಗೆ 500 ಕೋಟಿ ರೂ. ಹೊರೆಯಾಗಿದೆ.
ಅಲ್ಲದೆ 2024ರಲ್ಲಿ ನೌಕರರ ವೇತನ ಹೆಚ್ಚಳ ಮಾಡಲಾಗಿದ್ದು, ಒಟ್ಟಾರೆ 7,719 ಕೋಟಿ ರೂ. ಹೊಣೆಗಾರಿಕೆ ಹಾಗೂ 2,192 ಕೋಟಿ ರೂ. ಸಾಲ ಇರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಸಾರಿಗೆ ಜಾಲ ಹೊಂದಿರುವ ಕರ್ನಾಟಕದಲ್ಲಿ ಪ್ರತಿದಿನ 26,125 ಬಸ್‌ಗಳು 24,179 ಮಾರ್ಗಗಳಲ್ಲಿ ಸಂಚರಿಸುತ್ತಿದ್ದು, 1,03,646 ಸಿಬ್ಬಂದಿ 1.24 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದಾರೆ.
ಇದೇ ವೇಳೆ, ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಯಿಂದಾಗಿ ಸಾರಿಗೆ ನಿಗಮಗಳು ನಷ್ಟಕ್ಕೆ ಸಿಲುಕಿವೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಸಚಿವರು ಸಾರಾಸಗಟಾಗಿ ತಳ್ಳಿಹಾಕಿದರು. ನಿಗಮಗಳು ತಮ್ಮ ಸ್ವಂತ ವೆಚ್ಚದಲ್ಲಿ ಉಚಿತ ಪ್ರಯಾಣದ ಸೇವೆ ನೀಡುತ್ತಿಲ್ಲ, ಮಹಿಳೆಯರ ಪ್ರಯಾಣದ ಪೂರ್ಣ ಮೊತ್ತವನ್ನು ಸರ್ಕಾರವೇ ನಿಗಮಗಳಿಗೆ ಮರುಪಾವತಿಸುತ್ತಿದೆ. ಶಕ್ತಿ ಯೋಜನೆಯಡಿ ಬರಬೇಕಿರುವ 5,000 ಕೋಟಿ ರೂ. ಹಣವನ್ನು ಹಂತ ಹಂತವಾಗಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು.
ಬಸ್ ದರವನ್ನು ಯಾವುದೇ ಒಟ್ಟಾರೆ ಶೇಕಡಾವಾರು ಆಧಾರದ ಮೇಲೆ ಹೆಚ್ಚಿಸಿಲ್ಲ, ಬದಲಾಗಿ ಬಸ್ ಸಂಚರಿಸುವ ಕಿಲೋಮೀಟರ್ ಹಾಗೂ ನಿಗದಿತ ಹಂತಗಳ (ಸ್ಟೇಜ್) ಲೆಕ್ಕಾಚಾರದಲ್ಲಿ ಏರಿಕೆ ಮಾಡಲಾಗಿದೆ. ಪರಿಷ್ಕೃತ ದರಪಟ್ಟಿಯಂತೆ, ಬೆಂಗಳೂರು ಉಪನಗರ ಮಾರ್ಗಗಳಾದ ಮೆಜೆಸ್ಟಿಕ್‌ನಿಂದ ನೆಲಮಂಗಲ ಮತ್ತು ಹೊಸಕೋಟೆಗೆ 35 ರೂ. ಇದ್ದ ದರ 44 ರೂ.ಗೆ ಏರಿಕೆಯಾಗಿದೆ.
ಅದೇ ರೀತಿ ದೊಡ್ಡಬಳ್ಳಾಪುರ ಮತ್ತು ಆನೇಕಲ್‌ಗೆ 38 ರೂ.ನಿಂದ 47 ರೂ.ಗೆ ಹಾಗೂ ಮಾಗಡಿ, ಮಾಲೂರು ಮಾರ್ಗಕ್ಕೆ 46 ರೂ.ನಿಂದ 57 ರೂ.ಗೆ ಟಿಕೆಟ್ ದರ ಹೆಚ್ಚಳವಾಗಿದೆ.
ವೇಗದೂತ (ಎಕ್ಸ್‌ಪ್ರೆಸ್) ಬಸ್‌ಗಳ ಪ್ರಯಾಣ ದರವೂ ಗಣನೀಯವಾಗಿ ಏರಿಕೆ ಕಂಡಿದೆ. ಬೆಂಗಳೂರಿನಿಂದ ಕೋಲಾರ ಹಾಗೂ ತುಮಕೂರಿಗೆ 81 ರೂ. ಇದ್ದ ದರ 100 ರೂ.ಗೆ ಏರಿಕೆಯಾಗಿದೆ. ಮಂಡ್ಯಕ್ಕೆ 110 ರೂ.ನಿಂದ 136 ರೂ.ಗೆ, ಸಾಂಸ್ಕೃತಿಕ ನಗರಿ ಮೈಸೂರಿಗೆ 160 ರೂ.ನಿಂದ 197 ರೂ.ಗೆ, ಹಾಸನಕ್ಕೆ 219 ರೂ.ನಿಂದ 270 ರೂ.ಗೆ ಹಾಗೂ ಚಿಕ್ಕಮಗಳೂರಿಗೆ 295 ರೂ.ನಿಂದ 363 ರೂ.ಗೆ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿದೆ. ಈ ಹೊಸ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದ್ದು, ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಚಿತವಾಗಿದೆ.
