ಬೆಂಗಳೂರು: ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮೇಜರ್ ಸರ್ಜರಿ ಮಾಡಲಾಗಿದ್ದು, ಪ್ರಮುಖ ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು (DHO), ಉಪ ನಿರ್ದೇಶಕರು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಲಾಗಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಶಶಿಕಲಾ ಸಿ. ಅವರ ಸಹಿಯೊಂದಿಗೆ ನವೆಂಬರ್ 04ರಂದು ಈ ಕುರಿತ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ವರ್ಗಾವಣೆಗೊಂಡ ಎಲ್ಲಾ ವೈದ್ಯರು ತಕ್ಷಣವೇ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಆದೇಶದನ್ವಯ, ಬಾಗಲಕೋಟೆ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಯಾಗಿದ್ದ ಸುವರ್ಣ ಬಿ. ಕುಲಕರ್ಣಿ ಅವರನ್ನು ಬಾಗಲಕೋಟೆ ಡಿಎಚ್ಒ ಆಗಿ ಹಾಗೂ ಯಾದಗಿರಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಾಧಿಕಾರಿಯಾಗಿದ್ದ ಡಾ. ಸಂಜೀವ ಕುಮಾರ ರಾಯಚೂರಕರ್ ಅವರನ್ನು ಯಾದಗಿರಿಯ ಡಿಎಚ್ಒ ಹುದ್ದೆಗೆ ನೇಮಿಸಲಾಗಿದೆ.
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯ ಹಿರಿಯ ತಜ್ಞರಾಗಿದ್ದ ಡಾ. ಚಿದಾನಂದ ಹೆಚ್. ಗುಡೂರ್ ಅವರನ್ನು ಆರೋಗ್ಯ ಸೌಧದ ಉಪ ನಿರ್ದೇಶಕರ (M&F/NVBDCP) ಹುದ್ದೆಗೆ ನಿಯೋಜಿಸಲಾಗಿದ್ದು, ಈ ಹುದ್ದೆಯಲ್ಲಿದ್ದ ಡಾ. ಮೊಹಮ್ಮದ್ ಶರೀಫ ಅವರನ್ನು ಬೆಂಗಳೂರು ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಉಪ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ. ಡಾ. ಸುವರ್ಣ ಸಿ. ಅವರಿಗೆ ಮೈಸೂರು ವಿಭಾಗದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಉಪ ನಿರ್ದೇಶಕಿ ಹುದ್ದೆ ನೀಡಲಾಗಿದೆ.
ಜಿಲ್ಲಾ ಮಟ್ಟದ ಅಧಿಕಾರಿಗಳ ವಿಭಾಗದಲ್ಲಿ, ಹಾಸನ ಬೇಲೂರು ಆಸ್ಪತ್ರೆಯ ಡಾ. ಜಯಲಕ್ಷ್ಮೀ ನಾಯಕ್ ಅವರನ್ನು ಶಿವಮೊಗ್ಗ ಜಿಲ್ಲಾ ಮಲೇರಿಯಾ ಅಧಿಕಾರಿಯಾಗಿ, ಉಡುಪಿ ಕುಂದಾಪುರದ ಡಾ. ವಿಜಯಲಕ್ಷ್ಮೀ ನಾಯಕ್ ಅವರನ್ನು ಉಡುಪಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಯಾಗಿ, ಯಾದಗಿರಿಯ ಡಾ. ಅಬ್ದುಲ್ ಹಾಕ್ ನದೀಂ ಎಂ. ಅವರನ್ನು ರಾಯಚೂರು ಜಿಲ್ಲಾ ಫೈಲೇರಿಯಾ ವೈದ್ಯಾಧಿಕಾರಿಯಾಗಿ ಹಾಗೂ ಗದಗ ಬೆಟಗೇರಿಯ ಡಾ. ಪ್ರಕಾಶ್ ಕಬ್ಬುರಗಿ ಅವರನ್ನು ಕೊಪ್ಪಳ ಜಿಲ್ಲಾ ಸರ್ವೇಕ್ಷಣಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ತಾಲೂಕು ಹಂತದಲ್ಲಿ ಡಾ. ಹೆಚ್. ತೇಜಸ್ವಿ ಹೆಚ್.ಜಿ. ಅವರನ್ನು ಬೇಲೂರು, ಡಾ. ತಿಮ್ಮರಾಜು ಅವರನ್ನು ಅರಸೀಕೆರೆ ಹಾಗೂ ಡಾ. ರಮೇಶ ಸಿ.ಜಿ. ಅವರನ್ನು ದೊಡ್ಡಬಳ್ಳಾಪುರ ತಾಲೂಕು ಆರೋಗ್ಯಾಧಿಕಾರಿಯಾಗಿ ನಿಯೋಜಿಸಲಾಗಿದೆ.
ವರ್ಗಾವಣೆಗೊಂಡ ವೈದ್ಯರು ನಿಯಮಿತ ಮಾನದಂಡ ಪೂರೈಸದಿದ್ದಲ್ಲಿ ವರ್ಗಾವಣೆ ಹಿಂಪಡೆಯುವ ಷರತ್ತು ವಿಧಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಪ್ರಭಾರ ವರ್ಗಾವಣೆ ಪ್ರಮಾಣ ಪತ್ರ (CTC) ಸಲ್ಲಿಸಲು ನಿರ್ದೇಶಿಸಲಾಗಿದೆ.
