ಬೆಂಗಳೂರು: ರಾಜಧಾನಿಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಸಮರ ಸಾರಿರುವ ಸಿಸಿಬಿ (CCB) ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 6 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಚೂಡಿದಾರ್‌ನಲ್ಲಿ ಡ್ರಗ್ಸ್ ಸಾಗಾಟ: ನಾಲ್ವರ ಬಂಧನ
ಚೂಡಿದಾರ್‌ಗಳ ಒಳಗೆ ಬಚ್ಚಿಟ್ಟು ದೆಹಲಿಯಿಂದ ಎಂಡಿಎಂಎ (MDMA) ಸಾಗಿಸುತ್ತಿದ್ದ ಖತರ್ನಾಕ್ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹೀಲ್ ಕುಮಾರ್, ಸತ್ಯಂ, ಕಲೀಮ್ ಮತ್ತು ಕನ್ನಯ್ಯ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ವಿಕ್ಟರ್ ಮತ್ತು ಮೋಸಸ್ ಎಂಬುವವರು ನೀಡಿದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ನೈಜೀರಿಯಾ ಪ್ರಜೆಯಿಂದ ಲಿಂಕ್
ಆರೋಪಿಗಳು ದೆಹಲಿಯಲ್ಲಿದ್ದ ನೈಜೀರಿಯಾ ಮೂಲದ ವ್ಯಕ್ತಿಯೊಬ್ಬನಿಂದ ಎಂಡಿಎಂಎ ಪಡೆದು ಬೆಂಗಳೂರಿಗೆ ತರುತ್ತಿದ್ದರು. ಈ ಮಾದಕ ವಸ್ತುವನ್ನು ಸಾಹೀಲ್ ಕುಮಾರ್‌ಗೆ ತಲುಪಿಸಲು ಸತ್ಯಂ, ಕಲೀಮ್ ಹಾಗೂ ಕನ್ನಯ್ಯ ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ ಬರೋಬ್ಬರಿ ₹26.60 ಲಕ್ಷ ಮೌಲ್ಯದ 12.925 ಕೆಜಿ ಎಂಡಿಎಂಎ ಹಾಗೂ 60 ಗ್ರಾಂ ಕೊಕೇನ್ ಜಪ್ತಿ ಮಾಡಲಾಗಿದೆ.
ರಾಜಸ್ಥಾನದಿಂದ ಆಫೀಮು ಸಾಗಾಟ; ಇಬ್ಬರ ಬಂಧನ
ಸಿಸಿಬಿ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ರಾಜಸ್ಥಾನದಿಂದ ಮಾದಕ ವಸ್ತುಗಳನ್ನು ತರಿಸುತ್ತಿದ್ದ ಲುಂಬುರಾಮ್ ಮತ್ತು ಅನುಪ್ ರಾಮ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 7 ಕೆಜಿ ಆಫೀಮು ಹಾಗೂ 225 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
