ಬೆಂಗಳೂರು: ಅಮಾನತುಗೊಂಡಿರುವ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದ ವಿಡಿಯೋ ಮತ್ತು ಸುದ್ದಿ ಪ್ರಸಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿದ್ದ ರಾಮಚಂದ್ರ ರಾವ್ ಅವರು ಸಲ್ಲಿಸಿದ್ದ ಸಿವಿಲ್ ಅರ್ಜಿಯನ್ನು ವಿಚಾರಣೆ ನಡೆಸಿದ ಬೆಂಗಳೂರಿನ 25ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು, ಟಿವಿ9 ಕನ್ನಡ ಮತ್ತು ನ್ಯೂಸ್9 ವಾಹಿನಿಗಳಿಗೆ ಈ ನಿರ್ಬಂಧ ಹೇರಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ರಾಮಚಂದ್ರ ರಾವ್ ಅವರ ವಿರುದ್ಧದ ಯಾವುದೇ ಆಕ್ಷೇಪಾರ್ಹ ವಿಡಿಯೋಗಳು, ಆಡಿಯೋ ಕ್ಲಿಪ್‌ಗಳು, ಕಾಲ್ ರೆಕಾರ್ಡಿಂಗ್‌ಗಳು ಅಥವಾ ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸಲು ಅಥವಾ ಪ್ರಸಾರ ಮಾಡಲು ಈ ಮಾಧ್ಯಮ ಸಂಸ್ಥೆಗಳಿಗೆ ಅವಕಾಶವಿಲ್ಲ. ಅಷ್ಟೇ ಅಲ್ಲದೆ, ಈಗಾಗಲೇ ಸಾಮಾಜಿಕ ಜಾಲತಾಣಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಲಾದ ಅಶ್ಲೀಲ ಎನ್ನಲಾದ ವಿಡಿಯೋ ಹಾಗೂ ವರದಿಗಳನ್ನು ಕೂಡಲೇ ತೆಗೆದುಹಾಕುವಂತೆ (Take down) ನ್ಯಾಯಾಧೀಶರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 27, 2026ಕ್ಕೆ ನಿಗದಿಪಡಿಸಲಾಗಿದೆ.
ತಮ್ಮ ಕಚೇರಿಯಲ್ಲಿ ರಾಮಚಂದ್ರ ರಾವ್ ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಗಳು ಎನ್ನಲಾದ ಮೂರು ವಿಡಿಯೋ ಕ್ಲಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಸರ್ಕಾರವು, ಇದು “ಸರ್ಕಾರಿ ನೌಕರನಿಗೆ ಶೋಭೆ ತರುವ ನಡವಳಿಕೆಯಲ್ಲ” ಎಂದು ಅಭಿಪ್ರಾಯಪಟ್ಟು ಅವರನ್ನು ಜನವರಿ 20ರಂದು ಸೇವೆಯಿಂದ ಅಮಾನತುಗೊಳಿಸಿತ್ತು.
ಆದರೆ, ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ನಿರಾಕರಿಸಿರುವ ರಾಮಚಂದ್ರ ರಾವ್, ಈ ವಿಡಿಯೋಗಳು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋಗಳಾಗಿದ್ದು, ತಮ್ಮ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚುವ ಸಂಚು ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದೆ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಇವರ ಪುತ್ರಿ ಬಂಧನಕ್ಕೊಳಗಾದಾಗಲೂ ರಾವ್ ಅವರ ಹೆಸರು ವಿವಾದಕ್ಕೀಡಾಗಿತ್ತು. ಪ್ರಸ್ತುತ ನ್ಯಾಯಾಲಯದ ಈ ಆದೇಶವು ಮಾಧ್ಯಮ ಪ್ರಸಾರದ ಮೇಲೆ ತಾತ್ಕಾಲಿಕ ಬ್ರೇಕ್ ಹಾಕಿದ್ದು, ಮುಂದಿನ ವಿಚಾರಣೆಯಲ್ಲಿ ಸತ್ಯಾಸತ್ಯತೆ ಹೊರಬರಬೇಕಿದೆ.
