ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನಕಲಿ ಔಷಧಿ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (SIT) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ನನ್ನು ಬಂಧಿಸಿದ್ದಾರೆ. ಈತನ ಬಂಧನದ ಬೆನ್ನಲ್ಲೇ ಈ ಬೃಹತ್ ಜಾಲದ ಕಳ್ಳಾಟದ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.
ನಕಲಿ ಔಷಧಿಗಳನ್ನು ಅಸಲಿ ಎಂದು ನಂಬಿಸಲು ಆರೋಪಿ ಪ್ರಶಾಂತ್, ಪ್ರಖ್ಯಾತ ‘ಫೈಜರ್’ (Pfizer) ಕಂಪನಿಯ ಒರಿಜಿನಲ್ ಲೇಬಲ್ ತರುವುದಕ್ಕಾಗಿಯೇ ವರ್ಷದಲ್ಲಿ ಹತ್ತಾರು ಬಾರಿ ಟರ್ಕಿಗೆ ಪ್ರಯಾಣ ಬೆಳೆಸುತ್ತಿದ್ದ. ಪದೇಪದೇ ಟರ್ಕಿಗೆ ಹೋಗುತ್ತಿದ್ದ ಕಾರಣ ಆತನ ವೀಸಾ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಆತ ಟರ್ಕಿಯ ಅಕ್ಕಪಕ್ಕದ ಅಜರ್ಬೈಜಾನ್ ಸೇರಿದಂತೆ ಇತರೆ ದೇಶಗಳಿಗೆ ಭೇಟಿ ನೀಡಲು ಶುರುಮಾಡಿದ್ದ. ಅಲ್ಲಿನ ಮಧ್ಯವರ್ತಿಗಳ ಮೂಲಕ ಫೈಜರ್ ಕಂಪನಿಯ ಒರಿಜಿನಲ್ ಲೇಬಲ್ಗಳನ್ನು ತರಿಸಿಕೊಂಡು, ಅವುಗಳನ್ನು ಇಲ್ಲಿ ಉತ್ಪಾದಿಸಿದ ನಕಲಿ ಔಷಧಿಗಳಿಗೆ ಅಂಟಿಸಿ ಪ್ಯಾಕ್ ಮಾಡುತ್ತಿದ್ದ. ಅಧಿಕಾರಿಗಳ ಕಣ್ತಪ್ಪಿಸಲು ಹಲವು ಬಾರಿ ಅಸಲಿ ಔಷಧಿಗಳ ಜೊತೆಯಲ್ಲೇ ಈ ನಕಲಿ ಔಷಧಿಗಳನ್ನು ಬೆರೆಸಿ ಸರಬರಾಜು ಮಾಡುತ್ತಿದ್ದ ವಿಚಾರ ಎಸ್ಐಟಿ ತನಿಖೆ ವೇಳೆ ಬಯಲಾಗಿದೆ.
ಈತನ ಪತ್ತೆಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ (Look-out Notice) ಜಾರಿ ಮಾಡಿದ್ದರು. ಸೆಪ್ಟೆಂಬರ್ 28ರಂದು ಅಜರ್ಬೈಜಾನ್ನಿಂದ ಹಿಂದಿರುಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬಂದಿಳಿಯುತ್ತಿದ್ದಂತೆಯೇ ಅರೈವಲ್ ಗೇಟ್ನಲ್ಲಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಎಸಿಪಿ ಅಂಜನ್ ಕುಮಾರ್ ನೇತೃತ್ವದ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಇದೇ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿಯಾಗಿರುವ ವೀರೇಶ್ ಜೈನ್, ಈ ನಕಲಿ ಔಷಧಿಗಳ ಉತ್ಪಾದನೆ ಹಾಗೂ ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ. ಈತ ಬೆಂಗಳೂರಿನ ವಿವಿಧ ಆಸ್ಪತ್ರೆಗಳು ಹಾಗೂ ಮೆಡಿಕಲ್ ಸ್ಟೋರ್ಗಳಿಗೆ ಈ ನಕಲಿ ಔಷಧಿಗಳನ್ನು ಪೂರೈಸುತ್ತಿದ್ದ. ಈ ಜಾಲವು ವಾರ್ಷಿಕ ಬರೋಬ್ಬರಿ 15 ಕೋಟಿ ರೂಪಾಯಿಗಳಷ್ಟು ಬೃಹತ್ ವಹಿವಾಟು ನಡೆಸುತ್ತಿತ್ತು ಎಂಬ ಆಘಾತಕಾರಿ ಅಂಶವನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದು, ಜಾಲದಲ್ಲಿರುವ ಇತರೆ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.
