ಬೆಂಗಳೂರು: ರಾಜಧಾನಿಯ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಅನಿಯಂತ್ರಿತ ಜಾಹೀರಾತು ಬ್ಯಾನರ್‌ಗಳ ಹಾವಳಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಶಾಶ್ವತ ಕಡಿವಾಣ ಹಾಕಲು ಮುಂದಾಗಿದೆ. ಇನ್ನು ಮುಂದೆ ನಗರದಲ್ಲಿ ಎಲ್ಲೆಂದರಲ್ಲಿ ಮನಸೋಇಚ್ಛೆ ಜಾಹೀರಾತು ಫಲಕಗಳು, ಪೋಸ್ಟರ್‌ಗಳು ಅಥವಾ ಬ್ಯಾನರ್‌ಗಳನ್ನು ಪ್ರದರ್ಶಿಸುವಂತಿಲ್ಲ ಎಂದು ಜಿಬಿಎ ಖಡಕ್ ಎಚ್ಚರಿಕೆ ನೀಡಿದೆ.
200 ಮೀಟರ್‌ಗೆ ಎರಡೇ ಜಾಹೀರಾತು!
‘ಜಿಬಿಎ ಜಾಹೀರಾತು ನಿಯಮ 2025’ರ ಅಂತಿಮ ಅಧಿಸೂಚನೆಯನ್ನು ಇದೀಗ ಪ್ರಕಟಿಸಲಾಗಿದೆ. ಈ ಹೊಸ ನಿಯಮದ ಪ್ರಕಾರ, ಜಾಹೀರಾತುಗಳ ಅಳವಡಿಕೆಗೆ ಕಟ್ಟುನಿಟ್ಟಿನ ಮಿತಿ ಹೇರಲಾಗಿದೆ. ನಗರದ ಯಾವುದೇ ರಸ್ತೆಯಿರಲಿ, ಪ್ರತಿ 200 ಮೀಟರ್ ಅಂತರದಲ್ಲಿ ಕೇವಲ 2 ಜಾಹೀರಾತು ಫಲಕಗಳನ್ನು ಅಳವಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಇದರಿಂದ ರಸ್ತೆ ಬದಿಯಲ್ಲಿ ಸಾಲು ಸಾಲಾಗಿ ಬ್ಯಾನರ್ ಕಟ್ಟಿ ನಗರವನ್ನು ಕುರೂಪಗೊಳಿಸುವುದಕ್ಕೆ ತಡೆ ಬೀಳಲಿದೆ.
ಧಾರ್ಮಿಕ, ಪಾರಂಪರಿಕ ಸ್ಥಳಗಳಲ್ಲಿ ‘ನೋ ಬ್ಯಾನರ್’
ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳು ಮತ್ತು ಶ್ರದ್ಧಾ ಕೇಂದ್ರಗಳನ್ನು ಜಾಹೀರಾತು ಮುಕ್ತ ವಲಯಗಳನ್ನಾಗಿ ಘೋಷಿಸಲಾಗಿದೆ. ದೇವಾಲಯ, ಮಸೀದಿ, ಗುರುದ್ವಾರ, ಚರ್ಚ್‌ಗಳು, ವಿಶ್ವ ಪಾರಂಪರಿಕ ಸ್ಥಳಗಳು, ರಾಷ್ಟ್ರೀಯ ಉದ್ಯಾನವನಗಳು ಹಾಗೂ ಸ್ಮಾರಕಗಳ ಆವರಣದಲ್ಲಿ ಅಥವಾ ಸುತ್ತಮುತ್ತ ಯಾವುದೇ ರೀತಿಯ ವಾಣಿಜ್ಯ ಜಾಹೀರಾತು ಫಲಕಗಳನ್ನು ಅಳವಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
