S Shorts

ಬೆಂಗಳೂರಿನ PGಗಳಿಗೆ GBA ಶಾಕ್: ಕೊಳೆತ ತರಕಾರಿ ಬಳಕೆ, ಅಶುಚಿತ್ವ; ಹಲವು ಪಿಜಿಗಳಿಗೆ ಬಿತ್ತು ಬೀಗ!

ಬೆಂಗಳೂರಿನ PGಗಳಿಗೆ GBA ಶಾಕ್: ಕೊಳೆತ ತರಕಾರಿ ಬಳಕೆ, ಅಶುಚಿತ್ವ; ಹಲವು ಪಿಜಿಗಳಿಗೆ ಬಿತ್ತು ಬೀಗ!
Author: Sagaradventure
Posted By: Sagaradventure
Updated: Jan 10, 2026 | 11:20 AM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ನಡೆಸುತ್ತಿದ್ದ ಪೇಯಿಂಗ್ ಗೆಸ್ಟ್ (PG) ಮಾಲೀಕರಿಗೆ ಬೆಂಗಳೂರು ಕೇಂದ್ರ ಪಾಲಿಕೆ (GBA) ಬಿಸಿ ಮುಟ್ಟಿಸಿದೆ. ಉದ್ದಿಮೆ ಪರವಾನಗಿ ಪಡೆಯದೆ ಹಾಗೂ ಕನಿಷ್ಠ ಶುಚಿತ್ವವನ್ನೂ ಕಾಪಾಡದೆ ಪಿಜಿ ನಡೆಸುತ್ತಿದ್ದವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಿದ್ದು, ನಿಯಮ ಉಲ್ಲಂಘಿಸಿದ ಪಿಜಿಗಳಿಗೆ ಬೀಗ ಜಡಿಯುವ ಮೂಲಕ ಶಾಕ್ ನೀಡಿದ್ದಾರೆ.

ನಗರದ ಸಿ.ವಿ.ರಾಮನ್ ನಗರ ಹಾಗೂ ಶಾಂತಿನಗರ ವ್ಯಾಪ್ತಿಯಲ್ಲಿ ಜಿಬಿಎ ಅಧಿಕಾರಿಗಳು ದಿಢೀರ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪಿಜಿಗಳ ಅಡುಗೆ ಕೋಣೆಗಳಲ್ಲಿ ಕಂಡುಬಂದ ದೃಶ್ಯ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ. ಪಿಜಿ ನಿವಾಸಿಗಳಿಗೆ ಅಡುಗೆ ಮಾಡಲು ಕೊಳೆತು ಹೋದ ತರಕಾರಿಗಳನ್ನು ಬಳಸುತ್ತಿರುವುದು ಮತ್ತು ಅಡುಗೆ ಮನೆಯಲ್ಲಿ ಅಶುಚಿತ್ವ ತಾಂಡವವಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಪಿಜಿಗಳಿಗೆ ಸ್ಥಳದಲ್ಲೇ ನೋಟಿಸ್ ನೀಡಿ, ಕೆಲವಕ್ಕೆ ಬೀಗ ಜಡಿಯಲಾಗಿದೆ.

ಅಧಿಕಾರಿಗಳನ್ನೇ ಕಾಯಿಸಿದ ಮಾಲೀಕರು! 

ಪರಿಶೀಲನೆಗೆ ತೆರಳಿದ ಅಧಿಕಾರಿಗಳಿಗೆ ಪಿಜಿ ಮಾಲೀಕರು ಅಸಹಕಾರ ತೋರಿದ ಘಟನೆಗಳೂ ನಡೆದಿವೆ. ಶಾಂತಿನಗರದ ‘ಗಾರ್ಡನ್ ಪಿಜಿ’ ಸೇರಿದಂತೆ ಕೆಲವು ಕಡೆಗಳಲ್ಲಿ ಅಧಿಕಾರಿಗಳಿಗೆ ಪ್ರವೇಶ ನೀಡದೆ ಸತಾಯಿಸಲಾಗಿದೆ. ಬರೋಬ್ಬರಿ 20 ನಿಮಿಷಗಳ ಕಾಲ ಅಧಿಕಾರಿಗಳನ್ನು ಹೊರಗೆ ಕಾಯಿಸಿದ ನಂತರವಷ್ಟೇ ಒಳಗೆ ಬಿಡಲಾಗಿದೆ. ಇದು ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಯಿತು.

ಪರಿಶೀಲನೆ ವೇಳೆ ಅನೇಕ ಪಿಜಿಗಳಲ್ಲಿ ಅನಧಿಕೃತವಾಗಿ ಮೇಲ್ಛಾವಣಿ (Roofing) ಅಳವಡಿಕೆ ಮಾಡಿರುವುದು ಕಂಡುಬಂದಿದೆ. ನಿಯಮ ಮೀರಿ ನಿರ್ಮಾಣ ಮಾಡಲಾದ ಈ ಶೆಡ್‌ಗಳು ಮತ್ತು ಹೆಚ್ಚುವರಿ ನಿರ್ಮಾಣಗಳ ಬಗ್ಗೆ ಗರಂ ಆದ ಅಧಿಕಾರಿಗಳು, ಕೂಡಲೇ ಇದನ್ನು ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ. ನಿಯಮ ಉಲ್ಲಂಘಿಸಿದ ಪಿಜಿಗಳ ಗೋಡೆಗೆ ನೋಟಿಸ್ ಅಂಟಿಸಿರುವ ಅಧಿಕಾರಿಗಳು, ಮುಂದಿನ ದಿನಗಳಲ್ಲಿ ಸುಧಾರಣೆ ಕಾಣದಿದ್ದರೆ ಶಾಶ್ವತವಾಗಿ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.