ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಪೂರ್ತಿ ಧಾರಾಕಾರ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಗಿದೆ. ಮಳೆಯ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿಧಾನಗೊಂಡಿದ್ದು, ಐಟಿ ಕಾರಿಡಾರ್ ಸೇರಿದಂತೆ ಹಲವೆಡೆ ಭಾರಿ ವಾಹನ ದಟ್ಟಣೆ ಉಂಟಾಗಿದೆ.
ಯಶವಂತಪುರ, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಕಾರ್ಪೊರೇಷನ್, ಕೆ.ಆರ್. ಮಾರ್ಕೆಟ್, ಲಾಲ್‌ಬಾಗ್ ಸೇರಿದಂತೆ ನಗರದ ಹೃದಯ ಭಾಗದ ಹಲವು ಪ್ರದೇಶಗಳಲ್ಲಿ ರಾತ್ರಿ ಭಾರಿ ಮಳೆಯಾಗಿದೆ. ಇದರ ಜೊತೆಗೆ ವೈಟ್‌ಫೀಲ್ಡ್, ಮಾರತ್ತಹಳ್ಳಿ, ಹೊರ ವರ್ತುಲ ರಸ್ತೆ, ಬಳಗೆರೆ ಹಾಗೂ ಬೆಳ್ಳಂದೂರು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವರುಣನ ಆರ್ಭಟ ಜೋರಾಗಿದ್ದು, ರಸ್ತೆಯಲ್ಲಿ ನಿಂತ ನೀರಿನ ನಡುವೆಯೇ ವಾಹನ ಸಂಚಾರವನ್ನು ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ಹರಸಾಹಸ ಪಟ್ಟರು. ಇಂದು ಕೂಡ ನಗರದಲ್ಲಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಸಂಜೆ ವೇಳೆ ಟ್ರಾಫಿಕ್ ಜಾಮ್ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ.
ಇತ್ತ ನಗರದ ಹೊರವಲಯದ ನೆಲಮಂಗಲದ ಹಲವು ಭಾಗಗಳಲ್ಲಿಯೂ ರಾತ್ರಿಯಿಡೀ ಮಳೆಯಾಗಿದ್ದು, ಬೆಳಗಿನ ಜಾವವೂ ಮುಂದುವರಿದಿದೆ. ಮಳೆಯ ಅಬ್ಬರದ ನಡುವೆಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಲಾರಿಯೊಂದು 108 ಆಂಬ್ಯುಲೆನ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಚಿಕ್ಕಬಾಣಾವಾರ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ರಾಜ್ಯದಲ್ಲಿ ಇಂದು ಕೂಡ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಹಾಗೂ ತುಮಕೂರು ಸೇರಿದಂತೆ ಒಟ್ಟು 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದ ಬಿರುಗಾಳಿ ಹಾಗೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಬಹುತೇಕ ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಬೆಂಗಳೂರಿನಲ್ಲಿ ಮತ್ತೆ ಮಳೆಯ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
