S Shorts

ಆಯುಧ ಪೂಜೆ, ದಸರಾ ಸಂಭ್ರಮ: ಕೆ.ಆರ್. ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ದರ ಗಗನಕ್ಕೆ; ಬೆಲೆ ವಿವರ ಇಲ್ಲಿದೆ!

ಆಯುಧ ಪೂಜೆ, ದಸರಾ ಸಂಭ್ರಮ: ಕೆ.ಆರ್. ಮಾರುಕಟ್ಟೆಯಲ್ಲಿ ಹೂವು-ಹಣ್ಣುಗಳ ದರ ಗಗನಕ್ಕೆ; ಬೆಲೆ ವಿವರ ಇಲ್ಲಿದೆ!
Author: Sagaradventure
Posted By: Sagaradventure
Updated: Oct 19, 2026 | 9:56 AM

ನಾಡಿನಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ಮಳೆಯಿಂದಾಗಿ ಹೂವಿನ ಬೆಳೆ ಹಾನಿಯಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ದರಗಳು ಗಗನಕ್ಕೇರಿವೆ. ಬೆಲೆ ಏರಿಕೆಯ ನಡುವೆಯೂ ಭಾನುವಾರ ಮಾರುಕಟ್ಟೆಗೆ ಜನಸಾಗರವೇ ಹರಿದುಬಂದಿತ್ತು.

ಕೆ.ಆರ್. ಮಾರುಕಟ್ಟೆಯಲ್ಲಿ ಹೂವು ಮತ್ತು ಹಾರಗಳ ದರ:

  • ಸೇವಂತಿಗೆ: ಒಂದು ಮಾರು ₹150
  • ಮಲ್ಲಿಗೆ: ಒಂದು ಮಾರು ₹120
  • ಕನಕಾಂಬರ: ಒಂದು ಮಾರು ₹120
  • ಸುಗಂಧರಾಜ ಹಾರ: ₹300
  • ಸಣ್ಣ ಮಿನಿ ರೋಸ್ ಹಾರ: ₹550
  • ಮಿನಿ ಮಲ್ಲಿಗೆ ಹಾರ: ₹600
  • ದೊಡ್ಡ ರೋಸ್ ಹಾರ: ₹800
  • ದೊಡ್ಡ ತೋಮಾಲೆ: ₹2,500
  • ಸಾಮಾನ್ಯ ಜೋಡಿ ತೋಮಾಲೆ: ₹3,000
  • ತುಳಸಿ ಹಾರ: ₹30–₹40

ಹಣ್ಣು ಮತ್ತು ಇತರ ಪೂಜಾ ಸಾಮಗ್ರಿಗಳ ದರ:

  • ಸೇಬು: ಕೆಜಿಗೆ ₹140–₹200
  • ಕಪ್ಪು ದ್ರಾಕ್ಷಿ: ಕೆಜಿಗೆ ₹200
  • ಹಸಿರು ದ್ರಾಕ್ಷಿ: ಕೆಜಿಗೆ ₹280
  • ದಾಳಿಂಬೆ: ಕೆಜಿಗೆ ₹200–₹250
  • ಕಿತ್ತಳೆ: ಕೆಜಿಗೆ ₹100
  • ಸಪೋಟ: ಕೆಜಿಗೆ ₹100
  • ಏಲಕ್ಕಿ ಬಾಳೆಹಣ್ಣು: ಕೆಜಿಗೆ ₹80
  • ದೊಡ್ಡ ಬಾಳೆಹಣ್ಣು: ಕೆಜಿಗೆ ₹40
  • ಕುಂಬಳಕಾಯಿ: ಕೆಜಿಗೆ ₹40
  • ಅನಾನಸ್: ಜೋಡಿಗೆ ₹120
  • ಬಾಳೆಕಂದು: ₹50–₹100
  • ವೀಳ್ಯದೆಲೆ: ಒಂದು ಕಟ್ಟು ₹80

ಕಳೆದ ಎರಡು ದಿನಗಳಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ಹೂವು ಕಟಾವು ಮಾಡಲು ರೈತರಿಗೆ ತೊಂದರೆಯಾಗಿದೆ. ಹೂವಿನ ಇಳುವರಿ ಕಡಿಮೆಯಾಗಿ ಮಾರುಕಟ್ಟೆಗೆ ಪೂರೈಕೆ ತಗ್ಗಿರುವ ಕಾರಣ ಬೆಲೆ ದುಬಾರಿಯಾಗಿದೆ. ದಿಢೀರ್ ದರ ಏರಿಕೆಯಿಂದಾಗಿ ವ್ಯಾಪಾರದ ಪ್ರಮಾಣ ಕೊಂಚ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದರೆ, ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚಿನ ಹಣ ತೆರಬೇಕಾಗಿರುವುದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.