S Shorts

ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ನಷ್ಟದಲ್ಲೇ ಓಡುತ್ತಿದೆಯಾ ಬೆಂಗಳೂರು Metro? ಶೇ 12ರಷ್ಟು ಟಿಕೆಟ್ ದರ ಏರಿಕೆಗೆ BMRCL ಮನವಿ!

ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ನಷ್ಟದಲ್ಲೇ ಓಡುತ್ತಿದೆಯಾ ಬೆಂಗಳೂರು Metro? ಶೇ 12ರಷ್ಟು ಟಿಕೆಟ್ ದರ ಏರಿಕೆಗೆ BMRCL ಮನವಿ!
Author: Sagaradventure
Posted By: Sagaradventure
Updated: Jul 30, 2026 | 9:56 AM

ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ತಲುಪಿಸುತ್ತಿದ್ದರೂ, ಕಳೆದ ಮೂರು ವರ್ಷಗಳಿಂದ ಕೋಟ್ಯಂತರ ರೂಪಾಯಿ ನಷ್ಟದಲ್ಲೇ ಕಾರ್ಯಾಚರಣೆ ನಡೆಸುತ್ತಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೂರು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಬೃಹತ್ ನಷ್ಟವನ್ನು ಅನುಭವಿಸಿದೆ. ಪ್ರತಿನಿತ್ಯ 11 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದರೂ ಹಾಗೂ ನಿಗಮದ ಆದಾಯದಲ್ಲಿ ಏರಿಕೆಯಾಗುತ್ತಿದ್ದರೂ ಸಹ ಬಿಎಂಆರ್‌ಸಿಎಲ್ ಲಾಭದ ಹಳಿಗೆ ಬರಲು ಸಾಧ್ಯವಾಗುತ್ತಿಲ್ಲ.

ಬಿಎಂಆರ್‌ಸಿಎಲ್ ನೀಡಿರುವ ಅಂಕಿ-ಅಂಶಗಳ ಪ್ರಕಾರ, ನಿರಂತರವಾಗಿ ಹೆಚ್ಚುತ್ತಿರುವ ಕಾರ್ಯಾಚರಣೆ ಹಾಗೂ ಇತರ ನಿರ್ವಹಣಾ ವೆಚ್ಚಗಳೇ ಈ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. 2022-23ರ ಸಾಲಿನಲ್ಲಿ 784 ಕೋಟಿ ರೂಪಾಯಿ ಆದಾಯ ಬಂದಿದ್ದರೆ, ಖರ್ಚು 1,363 ಕೋಟಿ ರೂಪಾಯಿ ತಲುಪಿತ್ತು. ಹಾಗೆಯೇ 2023-24ರಲ್ಲಿ 900 ಕೋಟಿ ರೂಪಾಯಿ ಆದಾಯದ ಎದುರು 1,213 ಕೋಟಿ ರೂಪಾಯಿ ವೆಚ್ಚವಾಗಿತ್ತು. ಇನ್ನು 2024-25ರ ಸಾಲಿನಲ್ಲಿ 1,190 ಕೋಟಿ ರೂಪಾಯಿ ಆದಾಯ ಹರಿದುಬಂದಿದ್ದರೂ, ನಿಗಮದ ಒಟ್ಟು ವೆಚ್ಚ 1,935 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಬರೋಬ್ಬರಿ 620 ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ.

ಕಳೆದ ವರ್ಷವಷ್ಟೇ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಟಿಕೆಟ್ ದರದಲ್ಲಿ ಶೇಕಡಾ 71 ರಷ್ಟು ಏರಿಕೆ ಮಾಡಲಾಗಿದ್ದರೂ ನಿಗಮವನ್ನು ನಷ್ಟದಿಂದ ಪಾರುಮಾಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ನಿಗಮವು ಸಾಲದ ಸುಳಿಯಲ್ಲಿ ಸಿಲುಕುವುದನ್ನು ತಪ್ಪಿಸಲು ಬಿಎಂಆರ್‌ಸಿಎಲ್ ಅಧಿಕಾರಿಗಳು ಕೇಂದ್ರ ಸರ್ಕಾರದ ಮುಂದೆ ಮಹತ್ವದ ಪ್ರಸ್ತಾವನೆಯೊಂದನ್ನು ಇಟ್ಟಿದ್ದಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ಮೆಟ್ರೋ ಪ್ರಯಾಣ ದರವನ್ನು ಶೇಕಡಾ 12 ರಷ್ಟು ಹೆಚ್ಚಳ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದು, ಕೇಂದ್ರ ಸರ್ಕಾರ ಈ ಪ್ರಸ್ತಾವನೆಯನ್ನು ಪರಿಗಣಿಸುವಂತೆ ಕೋರಿದ್ದಾರೆ.