ಬೆಂಗಳೂರು: ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ 21.26 ಕಿ.ಮೀ. ಉದ್ದದ ನಮ್ಮ ಮೆಟ್ರೋ ‘ಪಿಂಕ್ ಲೈನ್’ ಯೋಜನೆಯ ವೆಚ್ಚ ಬರೋಬ್ಬರಿ ದುಪ್ಪಟ್ಟಾಗಿದೆ. ಮೂಲತಃ 8,730 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪೂರ್ಣಗೊಳ್ಳಬೇಕಿದ್ದ ಈ ಯೋಜನೆ, ಇದೀಗ 17,346 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ವೆಚ್ಚ ಹೆಚ್ಚಳಕ್ಕೆ ಕಾರಣಗಳೇನು?
ಪಿಂಕ್ ಲೈನ್ 13.76 ಕಿ.ಮೀ. ಭೂಗತ ಹಾಗೂ 7.5 ಕಿ.ಮೀ. ಎಲಿವೇಟೆಡ್ ಮಾರ್ಗವನ್ನು ಒಳಗೊಂಡಿದೆ. ಇದರಲ್ಲಿ ಭೂಗತ ಮಾರ್ಗ ನಿರ್ಮಾಣಕ್ಕೇ 13,876 ಕೋಟಿ ರೂ. (ಪ್ರತಿ ಕಿ.ಮೀ.ಗೆ ಸಾವಿರ ಕೋಟಿಗೂ ಅಧಿಕ) ವೆಚ್ಚವಾಗುತ್ತಿದೆ. 2016ರಲ್ಲೇ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ 2020ರಲ್ಲಿ ಆರಂಭಗೊಂಡಿದ್ದೇ ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣ. ಇದರ ಜೊತೆಗೆ ಸುರಂಗ ಕೊರೆಯುವ ಯಂತ್ರಗಳ ಬಾಡಿಗೆ, ನಿರ್ಮಾಣ ಸಾಮಗ್ರಿಗಳ (ಕಬ್ಬಿಣ, ಸಿಮೆಂಟ್) ಬೆಲೆಯಲ್ಲಿ ಶೇ. 40ರಷ್ಟು ಏರಿಕೆ, ಕಾರ್ಮಿಕರ ಕೊರತೆ ಹಾಗೂ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳ ಅಳವಡಿಕೆ ಯೋಜನಾ ವೆಚ್ಚವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿವೆ.
2027ಕ್ಕೆ ಯೋಜನೆ ಮುಂದೂಡಿಕೆ:
ಪ್ರಸ್ತುತ ಕಾಮಗಾರಿ ಕೇವಲ ಶೇ. 70ರಷ್ಟು ಮಾತ್ರ ಪೂರ್ಣಗೊಂಡಿದ್ದು, 2026ರ ಅಂತ್ಯಕ್ಕೆ ಮುಗಿಯಬೇಕಿದ್ದ ಯೋಜನೆಯ ಡೆಡ್‌ಲೈನ್ ಅನ್ನು 2027ಕ್ಕೆ ಮುಂದೂಡಲಾಗಿದೆ. ನಿರಂತರ ವಿಳಂಬದಿಂದಾಗಿ ದಿನನಿತ್ಯ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಬಿಎಂಆರ್‌ಸಿಎಲ್ ಅನ್ನು ಆಗ್ರಹಿಸಿದ್ದಾರೆ.
