S Shorts

Silicon Cityಯಲ್ಲಿ 25 ಲಕ್ಷ ಗಡಿ ದಾಟಿದ ಖಾಸಗಿ ಕಾರುಗಳ ಸಂಖ್ಯೆ; ಮುಂಬೈ, ದೆಹಲಿ ಹಿಂದಿಕ್ಕಿ ಹೊಸ ದಾಖಲೆ!

Silicon Cityಯಲ್ಲಿ 25 ಲಕ್ಷ ಗಡಿ ದಾಟಿದ ಖಾಸಗಿ ಕಾರುಗಳ ಸಂಖ್ಯೆ; ಮುಂಬೈ, ದೆಹಲಿ ಹಿಂದಿಕ್ಕಿ ಹೊಸ ದಾಖಲೆ!
Author: Sagaradventure
Posted By: Sagaradventure
Updated: Jul 21, 2026 | 11:47 AM

ಬೆಂಗಳೂರು: ನಗರದಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಖಾಸಗಿ ಕಾರುಗಳ ನೋಂದಣಿಯಲ್ಲಿ ನಮ್ಮ ಬೆಂಗಳೂರು ದೇಶದಲ್ಲೇ ಹೊಸ ದಾಖಲೆ ಬರೆದಿದೆ. ದೆಹಲಿ ಹಾಗೂ ಮುಂಬೈ ಮಹಾನಗರಗಳನ್ನು ಹಿಂದಿಕ್ಕಿರುವ ಸಿಲಿಕಾನ್ ಸಿಟಿಯಲ್ಲಿ ಖಾಸಗಿ ಕಾರುಗಳ ಸಂಖ್ಯೆ ಬರೋಬ್ಬರಿ 25 ಲಕ್ಷದ ಗಡಿಯನ್ನು ದಾಟಿದೆ.

ಖಾಸಗಿ ಕಾರುಗಳ ಅಬ್ಬರ: ಪ್ರಮುಖ ಅಂಕಿ-ಅಂಶಗಳು 

ನಗರದ ಜನರಿಗೆ ಖಾಸಗಿ ವಾಹನಗಳ ಮೇಲಿನ ಅತಿಯಾದ ವ್ಯಾಮೋಹದಿಂದಾಗಿ ಪ್ರತಿದಿನ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಜೂನ್ ಅಂತ್ಯದ ವೇಳೆಗೆ ನಗರದಲ್ಲಿ ಒಟ್ಟು 25.2 ಲಕ್ಷ ಖಾಸಗಿ ಕಾರುಗಳು ನೋಂದಣಿಯಾಗಿವೆ. ಪ್ರತಿ ವರ್ಷ ಸರಾಸರಿ 1 ಲಕ್ಷ ಹೊಸ ಕಾರುಗಳು ಬೆಂಗಳೂರು ರಸ್ತೆಗಳಿಗೆ ಸೇರ್ಪಡೆಯಾಗುತ್ತಿವೆ. ಕೇವಲ ಜೂನ್ ತಿಂಗಳೊಂದರಲ್ಲೇ 13,516 ಹೊಸ ಕಾರುಗಳು ಆರ್‌ಟಿಒ (RTO) ನಲ್ಲಿ ನೋಂದಣಿಯಾಗಿವೆ. ಜೂನ್ ತಿಂಗಳ ಒಟ್ಟು ವಾಹನಗಳ ನೋಂದಣಿ (ಎಲ್ಲಾ ಮಾದರಿ) 78,084 ಕ್ಕೆ ತಲುಪಿದೆ.

ದ್ವಿಚಕ್ರ ವಾಹನಗಳಲ್ಲೂ ಬೆಂಗಳೂರೇ ನಂಬರ್ 1 

ಖಾಸಗಿ ಕಾರುಗಳಷ್ಟೇ ಅಲ್ಲದೆ, ದ್ವಿಚಕ್ರ ವಾಹನಗಳ ಬಳಕೆಯಲ್ಲೂ ಬೆಂಗಳೂರು ಮುಂಚೂಣಿಯಲ್ಲಿದೆ. ಪ್ರಸ್ತುತ ನಗರದಲ್ಲಿ ಬರೋಬ್ಬರಿ 87 ಲಕ್ಷ ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ. ಕಾರು ಮತ್ತು ದ್ವಿಚಕ್ರ ವಾಹನಗಳ ಒಟ್ಟಾರೆ ಸಂಖ್ಯೆಯಲ್ಲಿ ಬೆಂಗಳೂರು ದೇಶದಲ್ಲೇ ಅಗ್ರಸ್ಥಾನದಲ್ಲಿದೆ.

ದೆಹಲಿ, ಮುಂಬೈ ಜೊತೆಗಿನ ಹೋಲಿಕೆ ಇತರ ಪ್ರಮುಖ ಮಹಾನಗರಗಳಿಗೆ ಹೋಲಿಸಿದರೆ ಕಾಂಕ್ರೀಟ್ ಕಾಡಾಗಿರುವ ಬೆಂಗಳೂರಿನಲ್ಲಿ ವಾಹನಗಳ “ಕಾರುಬಾರು” ಮಿತಿಮೀರಿರುವುದು ಸ್ಪಷ್ಟವಾಗುತ್ತದೆ:

  • ದೆಹಲಿ: 60 ಲಕ್ಷ ದ್ವಿಚಕ್ರ ವಾಹನಗಳು ಮತ್ತು 22 ಲಕ್ಷ ಕಾರುಗಳು.
  • ಮುಂಬೈ: ಕೇವಲ 15 ಲಕ್ಷಕ್ಕೂ ಹೆಚ್ಚು ಖಾಸಗಿ ಕಾರುಗಳು.
  • ಬೆಂಗಳೂರು: 87 ಲಕ್ಷ ದ್ವಿಚಕ್ರ ವಾಹನಗಳು ಮತ್ತು 25.2 ಲಕ್ಷ ಕಾರುಗಳು.

ಟ್ರಾಫಿಕ್ ಆತಂಕ 

ಎಲ್ಲಾ ರಾಜ್ಯಗಳಿಗಿಂತ ಬೆಂಗಳೂರಿನಲ್ಲಿ ಅತಿ ಹೆಚ್ಚು ಖಾಸಗಿ ವಾಹನಗಳು ನೋಂದಣಿಯಾಗುತ್ತಿರುವುದು ನಗರದಲ್ಲಿ ಸಂಚಾರ ದಟ್ಟಣೆಗೆ (Traffic Jam) ಪ್ರಮುಖ ಕಾರಣವಾಗಿದೆ. ಸಾರ್ವಜನಿಕ ಸಾರಿಗೆಯ ಬದಲು ಸ್ವಂತ ವಾಹನಗಳ ಬಳಕೆಗೆ ಒತ್ತು ನೀಡುತ್ತಿರುವುದು ಭವಿಷ್ಯದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವ ಆತಂಕವನ್ನು ಸೃಷ್ಟಿಸಿದೆ.