S Shorts

ಫೋನ್ ಮಾಡಿ ಹೊರಗೆ ಕರೆಸಿ ಕಾಲೇಜು ಬಳಿಯೇ B.Com ವಿದ್ಯಾರ್ಥಿಯ ಬರ್ಬರ ಹ*ತ್ಯೆ!

ಫೋನ್ ಮಾಡಿ ಹೊರಗೆ ಕರೆಸಿ ಕಾಲೇಜು ಬಳಿಯೇ B.Com ವಿದ್ಯಾರ್ಥಿಯ ಬರ್ಬರ ಹ*ತ್ಯೆ!
Author: Sagaradventure
Posted By: Sagaradventure
Updated: Oct 1, 2026 | 1:04 PM

ಬೆಂಗಳೂರು: ರಾಜಧಾನಿಯ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜೊಂದರ ಬಳಿ 19 ವರ್ಷದ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿಯೊಬ್ಬನನ್ನು ದುಷ್ಕರ್ಮಿಗಳ ಗುಂಪು ಬರ್ಬರವಾಗಿ ಚಾಕುವಿನಿಂದ ಇರಿದು ಹ*ತ್ಯೆ ಮಾಡಿರುವ ಆಘಾತಕಾರಿ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಕಾಲೇಜು ಆವರಣದಲ್ಲಿದ್ದ ವಿದ್ಯಾರ್ಥಿಗೆ ಮೊಬೈಲ್ ಕರೆ ಮಾಡಿ ಹೊರಗೆ ಕರೆಯಿಸಿಕೊಂಡ ಕಿಡಿಗೇಡಿಗಳು, ಜಗಳ ತೆಗೆದು ಈ ಕೃತ್ಯ ಎಸಗಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ ಎನ್. ಯತೀಶ್, ಮಧ್ಯಾಹ್ನ ಸುಮಾರು 2:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ವಿದ್ಯಾರ್ಥಿ ಕಾಲೇಜಿನ ಒಳಗಿದ್ದ ಸಂದರ್ಭದಲ್ಲಿ ಆತನ ಮೊಬೈಲ್‌ಗೆ ಅಪರಿಚಿತ ಕರೆಯೊಂದು ಬಂದಿದ್ದು, ಕೆಳಗೆ ಬರುವಂತೆ ಸೂಚಿಸಲಾಗಿದೆ. ಅದರಂತೆ ವಿದ್ಯಾರ್ಥಿ ಕಾಲೇಜಿನ ಹೊರಗೆ ಬರುತ್ತಿದ್ದಂತೆಯೇ ಅಲ್ಲಿದ್ದ ಯುವಕರ ಗುಂಪೊಂದು ಆತನೊಂದಿಗೆ ಗಲಾಟೆ ಆರಂಭಿಸಿ ಏಕಾಏಕಿ ಹಲ್ಲೆ ನಡೆಸಿದೆ. ಈ ಜಗಳ ತಾರಕಕ್ಕೇರಿದಾಗ ಗುಂಪಿನಲ್ಲಿದ್ದ ಒಬ್ಬಾತ ಹರಿತವಾದ ಆಯುಧದಿಂದ ಆತನ ಎದೆಯ ಭಾಗಕ್ಕೆ ತೀವ್ರವಾಗಿ ಇರಿದಿದ್ದಾನೆ. ಹಲ್ಲೆ ನಡೆಸಿದ ಬೆನ್ನಲ್ಲೇ ದುಷ್ಕರ್ಮಿಗಳ ತಂಡ ಸ್ಥಳದಿಂದ ಪರಾರಿಯಾಗಿದೆ.

ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದ ವಿದ್ಯಾರ್ಥಿಯನ್ನು ಜೊತೆಯಲ್ಲಿದ್ದ ಆತನ ಸ್ನೇಹಿತರು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರಾದರೂ, ಪರೀಕ್ಷಿಸಿದ ವೈದ್ಯರು ಆತ ಮೃ*ತಪಟ್ಟಿರುವುದಾಗಿ ಘೋಷಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೊ*ಲೆ ಪ್ರಕರಣ ದಾಖಲಾಗಿದ್ದು, ಕೊ*ಲೆಗೆ ನಿಖರವಾದ ಕಾರಣ ಅಥವಾ ಉದ್ದೇಶವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ ಹಲ್ಲೆ ನಡೆಸಿದ ದುಷ್ಕರ್ಮಿಗಳಲ್ಲಿ ಯಾರೊಬ್ಬರೂ ಆ ಕಾಲೇಜಿನ ವಿದ್ಯಾರ್ಥಿಗಳಲ್ಲ ಎಂಬುದು ಸ್ಪಷ್ಟವಾಗಿದ್ದು, ತಲೆಮರೆಸಿಕೊಂಡಿರುವ ಹಂತಕರ ಪತ್ತೆಗಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.