ಬೆಂಗಳೂರು: ಬೆಂಗಳೂರಿನ ವಿದ್ಯಾರ್ಥಿ ತನ್ನ ಶಾಲೆಯ ಪೋಷಕರು ಮತ್ತು ಶಿಕ್ಷಕರ ಸಭೆಗೆ (Parent-Teacher Meeting) ಬರಲು ನಕಲಿ ಪೋಷಕರನ್ನು ಹುಡುಕುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ವಿಚಿತ್ರ ಜಾಹೀರಾತೊಂದು ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.
ತನ್ನ ಶಾಲೆಯಲ್ಲಿ ನಡೆಯಲಿರುವ ಪೋಷಕರ ಸಭೆಗೆ ತಂದೆ-ತಾಯಿಯಂತೆ ನಟಿಸಲು ಜನ ಬೇಕಾಗಿದ್ದಾರೆ. ಬರೋಬ್ಬರಿ 15,000 ರೂಪಾಯಿ ಹಣ ನೀಡಲಾಗುವುದು. ನಕಲಿ ಪೋಷಕರಾಗುವವರು ಕನಿಷ್ಠ 40 ವರ್ಷ ಮೇಲ್ಪಟ್ಟವರಾಗಿರಬೇಕು ಮತ್ತು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಬರಬೇಕು ಎಂಬ ಷರತ್ತನ್ನು ಆಕೆ ವಿಧಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.
ಮೊದಲು ರೆಡ್ಡಿಟ್ (Reddit) ನಲ್ಲಿ ಕಾಣಿಸಿಕೊಂಡ ಈ ಪೋಸ್ಟ್, ನಂತರ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (X) ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ. ನನ್ನ ತಂದೆ ನಿವೃತ್ತರಾಗಿದ್ದಾರೆ, ಅವರಿಗೆ ಕೆಲಸ ಬೇಕಾಗಿದೆ, ಕಳುಹಿಸಿಕೊಡಲೇ?, ನಾನು ಬರಲು ಸಿದ್ಧ, ಆದರೆ ನನಗೆ 15 ಸಾವಿರ ಬೇಡ, ಬರೀ ಬಿರಿಯಾನಿ ಕೊಡಿಸಿದರೆ ಸಾಕು ಎಂದು ತಮಾಷೆ ಮಾಡಿದ್ದಾರೆ.
ಶಾಲೆಯಲ್ಲಿ ನಡೆಯುವ ಪೋಷಕರು ಮತ್ತು ಶಿಕ್ಷಕರ ಸಭೆಯಲ್ಲಿ ಶಿಕ್ಷಕರಿಂದ ಬರುವ ದೂರುಗಳನ್ನು ತಪ್ಪಿಸಲು ಅಥವಾ ಮನೆಯಲ್ಲಿ ವಿಷಯ ತಿಳಿಯದಂತೆ ಮಾಡಲು ಈಕೆ ಈ ಉಪಾಯ ಹೂಡಿದ್ದಾಳೆ.
