S Shorts

Facebook ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ಟೆಕ್ಕಿ!

Facebook ಜಾಹೀರಾತು ನಂಬಿ 1.9 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ಟೆಕ್ಕಿ!
Author: Sagaradventure
Posted By: Sagaradventure
Updated: Sep 28, 2026 | 1:50 PM

ರಾಜ್ಯದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಅಮಾಯಕರನ್ನು ಬಲೆಗೆ ಬೀಳಿಸುವ ಜಾಲ ತೀವ್ರವಾಗಿ ಸಕ್ರಿಯವಾಗಿದೆ. ಇದೀಗ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಭಾರಿ ಲಾಭ ಗಳಿಸಬಹುದು ಎಂಬ ಫೇಸ್‌ಬುಕ್ ಜಾಹೀರಾತನ್ನು ನಂಬಿದ ಬೆಂಗಳೂರಿನ ಟೆಕ್ಕಿಯೊಬ್ಬರು ಬರೋಬ್ಬರಿ 1.9 ಕೋಟಿ ರೂಪಾಯಿಗಳನ್ನು ಕಳೆದುಕೊಂಡು ಸೈಬರ್ ವಂಚಕರಿಗೆ ಬಲಿಯಾಗಿದ್ದಾರೆ. 

ಈ ಕುರಿತು ಸಂತ್ರಸ್ತರು ಬೆಂಗಳೂರಿನ ಈಸ್ಟ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದು, ಪೊಲೀಸರು ವಂಚಕರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಸಂತ್ರಸ್ತರು ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ ಕಣ್ಣಿಗೆ ಬಿದ್ದ ಆನ್‌ಲೈನ್ ಟ್ರೇಡಿಂಗ್ ಜಾಹೀರಾತಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸೈಬರ್ ವಂಚಕರು, ಹೂಡಿಕೆ ಸಲಹೆಗಾರರು ಹಾಗೂ ಪ್ರತಿನಿಧಿಗಳ ಸೋಗಿನಲ್ಲಿ ಸಂತ್ರಸ್ತನನ್ನು ಸಂಪರ್ಕಿಸಿ ‘Proxtrend’ ಎಂಬ ನಕಲಿ ಹೂಡಿಕೆ ಪ್ಲಾಟ್‌ಫಾರ್ಮ್‌ಗೆ ಸೇರ್ಪಡೆಗೊಳ್ಳುವಂತೆ ಪ್ರಚೋದನೆ ನೀಡಿದ್ದರು. 

ವಂಚಕರ ನಯವಾದ ಮಾತುಗಳನ್ನು ನಂಬಿದ ಟೆಕ್ಕಿ, ಅವರ ಸೂಚನೆಯಂತೆ proxtrendltd.com ಎಂಬ ನಕಲಿ ವೆಬ್‌ಸೈಟ್‌ನಲ್ಲಿ ಖಾತೆ ತೆರೆದಿದ್ದರು. ವಿಶ್ವಾಸಾರ್ಹತೆ ಮೂಡಿಸಲು ಈ ವೆಬ್‌ಸೈಟ್‌ನಲ್ಲಿ ಕೊಮೊರೊಸ್ ದ್ವೀಪದ ಮ್ವಾಲಿಯಲ್ಲಿ ನೋಂದಾಯಿತ ಸಂಸ್ಥೆ ಎಂದು ನಕಲಿ ಮಾಹಿತಿಯನ್ನು ಸಹ ಪ್ರದರ್ಶಿಸಲಾಗಿತ್ತು.

ಫೆಬ್ರವರಿ 27 ರಿಂದ ಸೆಪ್ಟೆಂಬರ್ 9 ರವರೆಗಿನ ಅವಧಿಯಲ್ಲಿ ರಾಜಾ ಎಸ್, ವಿನಯ್ ಶರ್ಮಾ ಹಾಗೂ ಜಾರ್ಜ್ ಟೈಸನ್ ಎಂಬ ನಕಲಿ ಹೆಸರುಗಳಲ್ಲಿ ಮಾತನಾಡಿದ ಅಕೌಂಟ್ ಮ್ಯಾನೇಜರ್‌ಗಳು, ನಿರಂತರವಾಗಿ ಟ್ರೇಡಿಂಗ್ ಸಲಹೆ ನೀಡುತ್ತಾ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು. 

ಆರಂಭದಲ್ಲಿ ಆ್ಯಪ್‌ನಲ್ಲಿ ಭಾರಿ ಲಾಭ ಬಂದಂತೆ ನಕಲಿ ಬ್ಯಾಲೆನ್ಸ್ ತೋರಿಸಿ ವಿಶ್ವಾಸ ಗಳಿಸಿದ್ದ ವಂಚಕರು, ಸಂತ್ರಸ್ತರಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ 1.9 ಕೋಟಿ ರೂಪಾಯಿಗಳನ್ನು ಜಮೆ ಮಾಡಿಸಿಕೊಂಡಿದ್ದರು. ತರುವಾಯ ಸೆಪ್ಟೆಂಬರ್ 9 ರಂದು ಒಟ್ಟಾರೆ ಹಣವನ್ನು ಹಿಂಪಡೆಯಲು ಸಂತ್ರಸ್ತರು ಯತ್ನಿಸಿದಾಗ ಆ ಪ್ರಕ್ರಿಯೆಯನ್ನು ವಿಫಲಗೊಳಿಸಲಾಯಿತು. ಹಣ ಬಿಡುಗಡೆ ಮಾಡಲು ಹೆಚ್ಚುವರಿಯಾಗಿ 50 ಲಕ್ಷ ಹಾಗೂ 20 ಲಕ್ಷ ರೂಪಾಯಿ ಕಟ್ಟುವಂತೆ ವಂಚಕರು ಬೇಡಿಕೆ ಇಟ್ಟಾಗ ತಾನು ಮೋಸ ಹೋಗಿರುವುದು ಟೆಕ್ಕಿಯ ಅರಿವಿಗೆ ಬಂದಿದೆ. 

ತಕ್ಷಣವೇ ಎಚ್ಚೆತ್ತುಕೊಂಡ ಅವರು ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರು ಬಳಸಿದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲು ಕಾರ್ಯಾಚರಣೆ ಮುಂದುವರಿಸಿದ್ದಾರೆ.