S Shorts

BitCoin ಹಗರಣ: ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ

BitCoin ಹಗರಣ: ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ
Author: Sagaradventure
Posted By: Sagaradventure
Updated: Aug 29, 2026 | 10:53 AM

ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಅವರ ಜಾಮೀನು ಅರ್ಜಿಯನ್ನು ಇ.ಡಿ ವಿಶೇಷ ನ್ಯಾಯಾಲಯವು ವಜಾಗೊಳಿಸಿದೆ.

ಇ.ಡಿ ದಾಳಿ, ಚಾರ್ಜ್‌ಶೀಟ್ ಸಲ್ಲಿಕೆ 

ಬಿಟ್‌ಕಾಯಿನ್ ಹಗರಣದ ಕುರಿತು ತೀವ್ರ ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳು, ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್, ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇವಾಲ ಹಾಗೂ ಸುಖೇಶ್ ಹೆಗ್ಡೆ ಅವರ ನಿವಾಸಗಳ ಮೇಲೆ ದಿಢೀರ್ ದಾಳಿ ನಡೆಸಿದ್ದರು. ಈ ದಾಳಿಯ ವೇಳೆ ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. 

ದಾಖಲೆಗಳ ಆಧಾರದ ಮೇಲೆ ಶ್ರೀಕಿ, ರಾಬಿನ್ ಖಂಡೇವಾಲ ಮತ್ತು ಸುಖೇಶ್ ಹೆಗ್ಡೆ ಅವರನ್ನು ಅಧಿಕಾರಿಗಳು ಬಂಧಿಸಿದ್ದರು. ಸುದೀರ್ಘ ತನಿಖೆ ಪೂರ್ಣಗೊಳಿಸಿದ ಇ.ಡಿ, ಮೊಹಮ್ಮದ್ ನಲಪಾಡ್ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆ ಮಾಡಿತ್ತು.

ಎಸ್ಪಿಪಿ ಬಲವಾದ ವಾದ,ಕೋರ್ಟ್ ಆದೇಶ 

ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾದ ಕೆಲವು ದಿನಗಳ ನಂತರ, ಆರೋಪಿಗಳಾದ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಇ.ಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ) ಮಧು ಆರ್. ರಾವ್ ಅವರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದರು. 

ಪ್ರಕರಣದ ಗಂಭೀರತೆಯನ್ನು ವಿವರಿಸಿದ ಅವರು, ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು ಎಂದು ನ್ಯಾಯಾಲಯದ ಮುಂದೆ ಪ್ರಬಲವಾದ ವಾದ ಮಂಡಿಸಿದ್ದರು. ಎಸ್ಪಿಪಿ ಅವರ ವಾದವನ್ನು ಮಾನ್ಯ ಮಾಡಿದ ಇ.ಡಿ ವಿಶೇಷ ನ್ಯಾಯಾಲಯವು ಇಬ್ಬರೂ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ.