ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಜಾರಿಗೆ ತಂದ ಯುಪಿಐ (UPI) ಟಿಕೆಟ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು, ಸಂಸ್ಥೆಗೆ ಸೇರಬೇಕಾದ ಹಣವನ್ನು ತಮ್ಮ ಸ್ವಂತ ಖಾತೆಗೆ ಹಾಕಿಸಿಕೊಳ್ಳುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (BMTC) ಮೂವರು ಕಂಡಕ್ಟರ್‌ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಚಿಲ್ಲರೆ ಸಮಸ್ಯೆಗೆ ಪರಿಹಾರವಾಗಿ ಜಾರಿಗೆ ತಂದ ವ್ಯವಸ್ಥೆಯನ್ನೇ ಈ ಸಿಬ್ಬಂದಿ ತಮ್ಮ ಕಿಸೆ ತುಂಬಿಸಿಕೊಳ್ಳಲು ಬಳಸಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಅಮಾನತುಗೊಂಡವರನ್ನು ಘಟಕ-23ರ ನಿರ್ವಾಹಕ ಸುರೇಶ್, ಘಟಕ-3ರ ಚಾಲಕ-ನಿರ್ವಾಹಕ ಮಂಚೇಗೌಡ ಮತ್ತು ಘಟಕ-14ರ ನಿರ್ವಾಹಕ ಅಶ್ವಾಕ್‌ಖಾನ್ ಎಂದು ಗುರುತಿಸಲಾಗಿದೆ. ಬಿಎಂಟಿಸಿ ಬಸ್‌ಗಳಲ್ಲಿ ಅಳವಡಿಸಲಾದ ಅಧಿಕೃತ ಕ್ಯೂಆರ್ ಕೋಡ್ ಬದಲಿಗೆ, ಈ ನಿರ್ವಾಹಕರು ಪ್ರಯಾಣಿಕರಿಗೆ ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್‌ಗಳನ್ನು ತೋರಿಸಿ ಹಣ ಪಡೆದಿದ್ದಾರೆ. ಈ ಮೂಲಕ ಸಾವಿರಾರು ರೂಪಾಯಿ ಟಿಕೆಟ್ ಮೊತ್ತವನ್ನು ಸಂಸ್ಥೆಯ ಬೊಕ್ಕಸಕ್ಕೆ ಜಮೆ ಮಾಡದೆ ವಂಚಿಸಿ, ನಿಗಮದ ಆರ್ಥಿಕ ಶಿಸ್ತನ್ನು ಉಲ್ಲಂಘಿಸಿದ್ದಾರೆ.
ಲಕ್ಷಾಂತರ ರೂಪಾಯಿ ವಂಚನೆ:
ಬಿಎಂಟಿಸಿ ತಪಾಸಣಾ ತಂಡಗಳು ನಡೆಸಿದ ದಿಢೀರ್ ಪರಿಶೀಲನೆ ವೇಳೆ ಈ ಹಗರಣ ಬೆಳಕಿಗೆ ಬಂದಿದೆ. ವಿಚಾರಣೆಯ ಪ್ರಕಾರ, ನಿರ್ವಾಹಕ ಸುರೇಶ್ ಬರೋಬ್ಬರಿ 47,257 ರೂ., ಮಂಚೇಗೌಡ 54,358 ರೂ. ಹಾಗೂ ಅಶ್ವಾಕ್‌ಖಾನ್ 3,206 ರೂ. ಮೊತ್ತವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮೂವರ ವಿರುದ್ಧ ಶಿಸ್ತುಕ್ರಮ ಜರುಗಿಸಿ, ವಿಚಾರಣೆ ಮುಗಿಯುವವರೆಗೆ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಶೀಘ್ರದಲ್ಲೇ ಡೈನಾಮಿಕ್ ಕ್ಯೂಆರ್ ಕೋಡ್:
ಇಂತಹ ವಂಚನೆಗೆ ಕಡಿವಾಣ ಹಾಕಲು ಮುಂದಾಗಿರುವ ಬಿಎಂಟಿಸಿ, ಮುಂದಿನ ದಿನಗಳಲ್ಲಿ ‘ಡೈನಾಮಿಕ್ ಕ್ಯೂಆರ್ ಕೋಡ್’ (Dynamic QR Code) ಆಧಾರಿತ ಯುಪಿಐ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರಿಂದ ಪಾರದರ್ಶಕ ಮತ್ತು ದೋಷರಹಿತ ಟಿಕೆಟ್ ವಿತರಣೆ ಸಾಧ್ಯವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಅಲ್ಲದೆ, ಎಲ್ಲಾ ಘಟಕಗಳಲ್ಲಿ ಯುಪಿಐ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದಿನಕ್ಕೆ 2 ಕೋಟಿ ರೂ. ಯುಪಿಐ ಪಾವತಿ:
ಪ್ರಸ್ತುತ ಬಿಎಂಟಿಸಿ ಬಸ್‌ಗಳಲ್ಲಿ ಪ್ರತಿ ನಿತ್ಯ ಸುಮಾರು 7 ಕೋಟಿ ರೂ. ಆದಾಯ ಬರುತ್ತಿದ್ದು, ಅದರಲ್ಲಿ 3.50 ಕೋಟಿ ರೂ. ‘ಶಕ್ತಿ’ ಯೋಜನೆಯಡಿ ಮಹಿಳೆಯರ ಉಚಿತ ಟಿಕೆಟ್ ಮೌಲ್ಯವಾಗಿದೆ. ಉಳಿದ 3.50 ಕೋಟಿ ರೂ. ಆದಾಯದಲ್ಲಿ ಸುಮಾರು 2 ಕೋಟಿ ರೂ.ವರೆಗೂ ಯುಪಿಐ ಮೂಲಕವೇ ಪಾವತಿಯಾಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಒಬ್ಬ ನಿರ್ವಾಹಕನ ನಡೆ ಸಂಶಯಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಈ ಜಾಲ ಪತ್ತೆಯಾಗಿದ್ದು, ಇದೀಗ ಎಲ್ಲಾ ಡಿಪೋಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ.
