ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ (ಬಿಎಂಟಿಸಿ) ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ನಿಗಮದಲ್ಲಿ ಹಣವಿಲ್ಲದ ಕಾರಣ ಈ ತಿಂಗಳು ಸಿಬ್ಬಂದಿಗೆ ವೇತನ ಸಿಗುವುದು ಅನುಮಾನವಾಗಿದೆ ಎಂದು ಸಾರಿಗೆ ನೌಕರರ ಸಂಘದ ಮುಖಂಡ ಜಗದೀಶ್ ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು, ನಿರ್ವಾಹಕರು, ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 27 ಸಾವಿರ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ಬಳಿಕ ಸಂಸ್ಥೆಯ ಆದಾಯ ಸಂಗ್ರಹ ತೀವ್ರವಾಗಿ ಕುಸಿದಿದ್ದು, ನೌಕರರಿಗೆ ಸಕಾಲದಲ್ಲಿ ವೇತನ ಪಾವತಿಸಲೂ ನಿಗಮದ ಬಳಿ ಹಣವಿಲ್ಲದಂತಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಎಂಟಿಸಿಯ ಒಟ್ಟು 27 ಸಾವಿರ ನೌಕರರಿಗೆ ಪ್ರತಿ ತಿಂಗಳು ಸಂಬಳ ನೀಡಲು ಬರೋಬ್ಬರಿ 102 ಕೋಟಿ ರೂಪಾಯಿಗಳ ಅಗತ್ಯವಿದೆ. ಸಾಮಾನ್ಯವಾಗಿ ನಿಗಮದಲ್ಲಿ ಪ್ರತಿ ತಿಂಗಳ 1 ನೇ ತಾರೀಖಿನಂದು ಭದ್ರತಾ ಸಿಬ್ಬಂದಿಗೆ, 6 ನೇ ತಾರೀಖಿನಂದು ಡ್ರೈವರ್, ಕಂಡಕ್ಟರ್ ಹಾಗೂ ಮೆಕ್ಯಾನಿಕ್ಗಳಿಗೆ ಮತ್ತು 7 ನೇ ತಾರೀಖಿನಂದು ಅಧಿಕಾರಿಗಳಿಗೆ ವೇತನ ಪಾವತಿ ಮಾಡಲಾಗುತ್ತದೆ. ಆದರೆ, ಪ್ರಸಕ್ತ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಈ ಬಾರಿ ನಿಯಮಿತ ದಿನಾಂಕದಂದು ಸಂಬಳ ನೀಡುವುದು ಬಹುತೇಕ ಕಷ್ಟಸಾಧ್ಯವಾಗಿದ್ದು, ವೇತನ ಪಾವತಿ ದಿನಾಂಕವನ್ನು ಮುಂದೂಡಬಹುದು ಅಥವಾ ಸಿಬ್ಬಂದಿಗೆ ಕೇವಲ ಅರ್ಧ ಸಂಬಳವನ್ನು ಮಾತ್ರ ನೀಡುವ ಸಾಧ್ಯತೆಯಿದೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ನಾಲ್ಕೂ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ ಪಾವತಿಸಬೇಕಿರುವ 6,500 ಕೋಟಿ ರೂಪಾಯಿಗಳ ಬಾಕಿ ಮೊತ್ತವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ನೌಕರರ ಮುಖಂಡರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ನಡೆದ ವಿಶೇಷ ಅಧಿವೇಶನದಲ್ಲಿ ಖುದ್ದು ಸಾರಿಗೆ ಸಚಿವರೇ ನಿಗಮಗಳಿಗೆ 8,000 ಕೋಟಿ ರೂಪಾಯಿ ನಷ್ಟವಾಗಿದೆ, ಟಿಕೆಟ್ ದರ ಏರಿಸಲೇಬೇಕು ಮತ್ತು ಸಿಬ್ಬಂದಿಗೆ ಸಂಬಳ ಕೊಡಲು ಹಣವಿಲ್ಲ ಎಂದು ಹೇಳಿದ್ದನ್ನು ಜಗದೀಶ್ ಈ ಸಂದರ್ಭದಲ್ಲಿ ನೆನಪಿಸಿದರು.
ಆರ್ಥಿಕ ಬಿಕ್ಕಟ್ಟು ಎಷ್ಟರಮಟ್ಟಿಗೆ ತೀವ್ರಗೊಂಡಿದೆ ಎಂದರೆ, ಬಿಎಂಟಿಸಿಯಿಂದ ಡೀಸೆಲ್ ಪೂರೈಕೆ ಕಂಪನಿಗಳಿಗೆ ಪಾವತಿಸಬೇಕಾದ 600 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಅಲ್ಲದೆ, ಹಣದ ತೀವ್ರ ಕೊರತೆಯಿಂದಾಗಿ ಕಳೆದ 3 ತಿಂಗಳಿನಿಂದ ಬಸ್ಗಳ ಸುಗಮ ಕಾರ್ಯಾಚರಣೆಗೆ ಅತ್ಯಗತ್ಯವಾಗಿರುವ ಬಿಡಿ ಭಾಗಗಳನ್ನು ಸಹ ಖರೀದಿ ಮಾಡಲಾಗಿಲ್ಲ ಎಂಬ ಆಘಾತಕಾರಿ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.
