S Shorts

BMTC ಬಸ್ಸುಗಳಲ್ಲಿ ‘ಮಪ್ತಿ’ ಪೊಲೀಸರಿಗೂ ಉಚಿತ ಪ್ರಯಾಣ?!

BMTC ಬಸ್ಸುಗಳಲ್ಲಿ ‘ಮಪ್ತಿ’ ಪೊಲೀಸರಿಗೂ ಉಚಿತ ಪ್ರಯಾಣ?!
Author: Sagaradventure
Posted By: Sagaradventure
Updated: Aug 31, 2026 | 4:40 PM

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಸಾಮಾನ್ಯ ಹಾಗೂ ಸಾಮಾನ್ಯ ವೇಗದೂತ ಬಸ್ಸುಗಳಲ್ಲಿ ಸಾದಾ ಉಡುಗೆಯಲ್ಲಿ (ಮಪ್ತಿ) ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸುವಂತೆ ಕೋರಿ ಪೊಲೀಸ್ ಮಹಾನಿರ್ದೇಶಕರು (DG & IGP) ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಮಪ್ತಿ ಪೊಲೀಸರಿಗೆ ಈ ಸೌಲಭ್ಯವೇಕೆ? 

ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗ, ಅಪರಾಧ ವಿಭಾಗ, ಸಿಸಿಬಿ (CCB), ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಗಣ್ಯ ವ್ಯಕ್ತಿಗಳ ಅಂಗರಕ್ಷಕ ವಿಭಾಗದ ಸಿಬ್ಬಂದಿ ಹೆಚ್ಚಾಗಿ ಸಮವಸ್ತ್ರದ ಬದಲಾಗಿ ಸಾದಾ ಉಡುಗೆಯಲ್ಲಿಯೇ ಕಾರ್ಯನಿರ್ವಹಿಸುತ್ತಾರೆ. ಶಂಕಿತರ ಚಲನವಲನಗಳ ಮೇಲೆ ನಿಗಾವಹಿಸುವುದು, ರಹಸ್ಯ ಮಾಹಿತಿ ಸಂಗ್ರಹಿಸುವುದು ಹಾಗೂ ಅಪರಾಧಿಗಳನ್ನು ಬೆನ್ನತ್ತುವಂತಹ ಸೂಕ್ಷ್ಮ ಕಾರ್ಯಾಚರಣೆಗಳಿಗಾಗಿ ಇವರು ನಗರದಾದ್ಯಂತ ಸಂಚರಿಸಬೇಕಾಗುತ್ತದೆ.

ಸಮವಸ್ತ್ರವಿಲ್ಲದ ಕಾರಣ ಬಸ್ಸುಗಳಲ್ಲಿ ಪ್ರಯಾಣಿಸುವಾಗ ನಿರ್ವಾಹಕರು (ಕಂಡಕ್ಟರ್) ಟಿಕೆಟ್ ಪಡೆಯುವಂತೆ ಒತ್ತಾಯಿಸುವುದು ಹಾಗೂ ವಾಗ್ವಾದಗಳು ನಡೆಯುವುದು ಸಾಮಾನ್ಯವಾಗಿದೆ. ಇದರಿಂದಾಗಿ ಗುಪ್ತ ಕಾರ್ಯಾಚರಣೆಯಲ್ಲಿರುವ ಸಿಬ್ಬಂದಿಯ ಗುರುತು ಬಹಿರಂಗವಾಗುವ ಮತ್ತು ಅವರ ಕರ್ತವ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ, ಕರ್ತವ್ಯನಿರತ ಮಪ್ತಿ ಪೊಲೀಸರು ಇಲಾಖೆಯ ಅಧಿಕೃತ ಗುರುತಿನ ಚೀಟಿ (ID Card) ತೋರಿಸಿದಲ್ಲಿ ಅವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವೆಚ್ಚ ಭರಿಸುತ್ತಿರುವ ಪೊಲೀಸ್ ಇಲಾಖೆ 

ಪೊಲೀಸ್ ಸಿಬ್ಬಂದಿಗಳು ಬಿಎಂಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವುದರಿಂದ ಉಂಟಾಗುವ ವೆಚ್ಚವನ್ನು ಪೊಲೀಸ್ ಇಲಾಖೆಯೇ ಭರಿಸುತ್ತಿದೆ. 1982-83ನೇ ಸಾಲಿನಲ್ಲಿ ಪ್ರತಿ ತಿಂಗಳಿಗೆ ಸರಾಸರಿ 1200 ಸಿಬ್ಬಂದಿಗೆ ತಲಾ ರೂ. 25ರಂತೆ ವೆಚ್ಚ ನಿಗದಿಪಡಿಸಿ ಪಾವತಿಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಈ ಮೊತ್ತಕ್ಕೆ ಪ್ರತಿ ವರ್ಷ ಶೇ. 10ರಷ್ಟು ಹೆಚ್ಚಳ ಮಾಡಿ ಸರ್ಕಾರದಿಂದ ಮಂಜೂರಾತಿ ಪಡೆದು ಬಿಎಂಟಿಸಿಗೆ ಪಾವತಿಸಲಾಗುತ್ತಿದೆ.

ಈಗಾಗಲೇ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರು ಹಾಗೂ ಸರ್ಕಾರದ ಮಟ್ಟದಲ್ಲಿ ನಡೆದಿರುವ ಚರ್ಚೆಗಳ ಆಧಾರದ ಮೇಲೆ ಈ ನೂತನ ಕೋರಿಕೆ ಸಲ್ಲಿಸಲಾಗಿದ್ದು, ಮಪ್ತಿಯಲ್ಲಿರುವ ಪೊಲೀಸರಿಗೆ ಐಡಿ ಕಾರ್ಡ್ ಆಧಾರದ ಮೇಲೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಎಲ್ಲಾ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡಲು ಬಿಎಂಟಿಸಿಗೆ ಮನವಿ ಮಾಡಲಾಗಿದೆ.