‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರ ನಿರ್ದೇಶನದ, ಹೊಸ ಕೌಟುಂಬಿಕ ಕಥಾಹಂದರದ ‘ಬ್ರಹ್ಮಕಮಲ’ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಕೌಟುಂಬಿಕ ವ್ಯವಸ್ಥೆಯೊಳಗೆ ಮಹಿಳೆಯೊಬ್ಬಳು ಅನುಭವಿಸುವ ಸುಪ್ತ ನೋವು ಹಾಗೂ ಆಕೆಯ ಒಳತೋಟಿಯನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ. ಜನಪ್ರಿಯ ವಾಣಿಜ್ಯ ಸಿನಿಮಾಗಳ ನಡುವೆ ವಿಭಿನ್ನ ಆಲೋಚನೆಯ ಕಥನವಾಗಿ ಮೂಡಿಬಂದಿರುವ ಈ ಟ್ರೈಲರ್ ಪ್ರೇಕ್ಷಕರ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆ ಹುಟ್ಟುಹಾಕಿದೆ.
ಕುಟುಂಬವೊಂದರಲ್ಲಿ ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಕಥೆಯಾಗಿರುವ ಬ್ರಹ್ಮಕಮಲ ಚಿತ್ರವು ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಭರಪೂರ ಮೆಚ್ಚುಗೆ ಗಳಿಸಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಈ ಚಿತ್ರವು ಬರೋಬ್ಬರಿ ಮೂರು ಪ್ರದರ್ಶನಗಳನ್ನು ಕಂಡಿರುವುದು ಇದರ ಹೆಗ್ಗಳಿಕೆಯಾಗಿದೆ. ಪೂರ್ಣ ಚಂದ್ರ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಸೂಕ್ಷ್ಮ ಕಥನದಲ್ಲಿ ಅದ್ವಿತಿ ಶೆಟ್ಟಿ, ಋತು ಚೈತ್ರ, ಲೋಕೇಂದ್ರ ಸೂರ್ಯ, ಬಾಲ ರಾಜ್ವಾಡಿ, ಮಮತಾ ರಾಹುತ್, ಪ್ರಮೀಳಾ ಸುಬ್ರಮಣ್ಯ ಸೇರಿದಂತೆ ದೊಡ್ಡ ತಾರಾಗಣವೇ ಬಣ್ಣ ಹಚ್ಚಿದೆ. ಚಿತ್ರಕ್ಕೆ ಅನಂತ್ ಆರ್ಯನ್ ಅವರ ಸಂಗೀತ ನಿರ್ದೇಶನವಿದ್ದು, ಲೋಕೇಂದ್ರ ಸೂರ್ಯ ಛಾಯಾಗ್ರಹಣ, ಹಾಗೂ ದೀಪು ಅವರ ಸಂಕಲನವಿದೆ. ಪುಟ್ಟರಾಜು ಮತ್ತು ಪ್ರಮೀಳಾ ಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿರುವ ಈ ವಿಭಿನ್ನ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.
