ಒರಟ ಶ್ರೀ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಶಬರಿ’ ಚಿತ್ರದ “ತಂದಾನಿ ತನನೋ” ಎಂಬ ಸುಂದರ ವೀಡಿಯೋ ಸಾಂಗ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ. ನಿರ್ದೇಶಕರಾದ ಓಂ ಪ್ರಕಾಶ್ ರಾವ್, ರಘುರಾಮ್, ಬಾಲಾಜಿ ವೀರಾಸ್ವಾಮಿ ಹಾಗೂ ಉದ್ಯಮಿ ವಿ. ಬಾಬು ಅವರು ಈ ಹಾಡನ್ನು ಲೋಕಾರ್ಪಣೆಗೊಳಿಸಿ ಚಿತ್ರತಂಡದ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು.
ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿತ್ತು, ಇದೀಗ ಈ ಹೊಸ ಹಾಡು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಹಾಡು ಬಿಡುಗಡೆಗೊಳಿಸಿ ಮಾತನಾಡಿದ ಓಂಪ್ರಕಾಶ್ ರಾವ್ ಮತ್ತು ಬಾಲಾಜಿ ವೀರಾಸ್ವಾಮಿ, ಹಾಡು ಅತ್ಯದ್ಭುತವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಿ.ಆರ್. ಹೇಮಂತ್ ಕುಮಾರ್ ಅವರ ಮನಮುಟ್ಟುವ ಸಂಗೀತ, ಸರೆಗಮಪ ಖ್ಯಾತಿಯ ಅಶ್ವಿನ್ ಶರ್ಮಾ ಅವರ ಕಂಠಸಿರಿ ಹಾಗೂ ನಟರಾದ ಸಮರ್ಥ್ ಮತ್ತು ಧನ್ವಿ ಅವರ ಅಭಿನಯಕ್ಕೆ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದರು. ನಿರ್ದೇಶಕ ರಘುರಾಮ್ ಅವರು ಹೊಸಬರ ಈ ವಿಭಿನ್ನ ಪ್ರಯತ್ನವನ್ನು ಶ್ಲಾಘಿಸಿದರು. ವಿಶೇಷವೆಂದರೆ, ಚಿತ್ರದ ನಿರ್ದೇಶಕ ಒರಟ ಶ್ರೀ ಅವರೇ ಈ ಹಾಡಿಗೆ ಸಾಹಿತ್ಯ ಒದಗಿಸಿದ್ದು, ಸ್ಥಳದಲ್ಲಿಯೇ ಹಾಡನ್ನು ಸೃಷ್ಟಿಸಿದ ಅನುಭವವನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ನಟರಾದ ಸಮರ್ಥ್ ಮತ್ತು ಧನ್ವಿ ಮಾತ್ರವಲ್ಲದೆ ಒಂದು ಜೀಪ್ ಕೂಡ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದರು. ಬರವಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ರಮೇಶ್, ಸುಧಾಕರ್ ರೆಡ್ಡಿ ಯಾಕಸಿರಿ ಮತ್ತು ವಿಷ್ಣುಕಾಂತ್ ಎ. ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ಸಮರ್ಥ್ ಮತ್ತು ಕೃತಿಕಾ ಗೌಡ ನಾಯಕ-ನಾಯಕಿಯರಾಗಿ ನಟಿಸಿದ್ದು, ಎಂ.ಕೆ. ಮಠ, ನೀನಾಸಂ ಅಶ್ವತ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಚಿತ್ರಕ್ಕೆ ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಸಂಕಲನ ಹಾಗೂ ಕೋರ ಚಿನ್ನಯ್ಯ ಅವರ ಸಾಹಸ ನಿರ್ದೇಶನವಿದೆ.
